ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ 2025ರ ಗಡುವನ್ನು ಮಾರ್ಪಡಿಸಿ, 2024ಕ್ಕೆ ನಿಗದಿ ಪಡಿಸುವಂತೆ ಹಾಗೂ ಇದಕ್ಕೆ ತಕ್ಕ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆಯೇ 3ನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮೆಟ್ರೋ 2ನೇ ಹಂತದ ಯೋಜನೆಯಡಿ ಕಂಟೋನ್ಮೆಂಟ್ ನಿಂದ ಶಿವಾಜಿನಗರ ನಿಲ್ದಾಣದ ವರೆಗೆ ಸುರಂಗ ಮಾರ್ಗ ಕೊರೆದ ಟಿಬಿಎಂ ಊರ್ಜಾ ಯಂತ್ರವು ಹೊರಗೆ ಬರುವುದನ್ನು ವೀಕ್ಷಿಸಿದ ನಂತರ ಮಾತನಾಡುತ್ತಿದ್ದರು.
2ನೇ ಹಂತ 2024ಕ್ಕೆ ಮುಗಿಸಲು, ಯೋಜನೆ ರೂಪಿಸಿ, ಹೆಚ್ಚುವರಿ ಮಾನವಸಂಪನ್ಮೂಲ ಬಳಸಿಕೊಂಡು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇನ್ನು 21 ಕಿ. ಮೀ. ಕಾಮಗಾರಿ ಪೂರ್ಣವಾಗಬೇಕಾಗಿದೆ. ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಾದ ಬಳಿಕ 3ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಮೆಟ್ರೋ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಬೇಕಾಗಿದೆ. ಮೆಟ್ರೋ 2ನೇ ಹಂತ ಪೂರ್ಣಗೊಂಡಾಗ 56 ಕಿ. ಮೀ. ಮಾರ್ಗ ಪೂರ್ಣವಾಗಲಿದೆ. ಇದರೊಂದಿಗೆ 3ನೇ ಹಂತ ಕೈಗೆತ್ತಿಕೊಳ್ಳುತ್ತಿದ್ದೇವೆ. ಮೂರೂ ಹಂತಗಳು ಪೂರ್ಣಗೊಂಡಾಗ ಮೆಟ್ರೋ ರೈಲು ಬೆಂಗಳೂರಿನ ಜೀವನಾಡಿಯಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮೆಟ್ರೋ ಕಾಮಗಾರಿಯನ್ನು ಹಲವು ಸವಾಲುಗಳ ನಡುವೆಯೂ ವೈಜ್ಞಾನಿಕವಾಗಿ, ಸುರಕ್ಷತೆಗೆ ಆದ್ಯತೆ ನೀಡಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೊದಲ ಹಂತದಲ್ಲಿ ಹಲವು ಸವಾಲುಗಳು ಎದುರಾಗಿದ್ದವು. ಮೆಜೆಸ್ಟಿಕ ಬಳಿ ಟನೆಲ್ ಬೋರಿಂಗ್ ಮಷಿನ್ ಸಿಲುಕಿಕೊಂಡಿತ್ತು ಎಂದು ಸಿಎಂ ಸ್ಮರಿಸಿಕೊಂಡರು. ಇಂದು ಅತ್ಯುತ್ತಮ ಟಿಬಿಎಂ ಊರ್ಜಾ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ. 855 ಮೀ. ಸುರಂಗ ಕೊರೆಯಲಾಗಿದೆ ಎಂದು ಸಿಎಂ ತಿಳಿಸಿದರು.
ಮೆಟ್ರೋ ಯೋಜನೆಗೆ ಜನರು ಸಹಕಾರ ನೀಡಿದ್ದಾರೆ ಎಂದು ಬೆಂಗಳೂರು ನಗರದ ಎಲ್ಲ ದಿಕ್ಕಿನಲ್ಲಿ ಮೆಟ್ರೋ ವಿಸ್ತರಿಸಲು ಸಹಕಾರ ನೀಡಿದ ಜನತೆಗೆ ಧನ್ಯವಾದ ಸಲ್ಲಿಸಿದ ಮುಖ್ಯಮಂತ್ರಿಗಳು, ವಿಮಾನ ನಿಲ್ದಾಣದ ವರೆಗೆ ಮೆಟ್ರೋ ವಿಸ್ತರಣೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ಕೇಂದ್ರದಿಂದ ಉತ್ತಮ ಸಹಕಾರ ಹಾಗೂ ಹಣಕಾಸಿನ ನೆರವು ದೊರೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಉಮೇಶ ಕತ್ತಿ, ಎಸ್. ಟಿ. ಸೋಮಶೇಖರ, ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ, ಸಂಸದ ಪಿ. ಸಿ. ಮೋಹನ, ಶಾಸಕರಾದ ರಿಜ್ವಾನ್ ಅರ್ಷದ್, ಲೆಹರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.