ಬಸವ ನಾಡಿನ ಕ್ರಿಕೆಟ್ ಆಟಗಾರ್ತಿಯ ಸಾಧನೆಗೆ ಆಧುನಿಕ ಭಗೀರಥನ ಶುಭ ಹಾರೈಕೆ- ಬಿ ಎಲ್ ಡಿ ಇ ಸಂಸ್ಥೆಯಿಂದ ಸಕಲ ನೆರವಿನ ಭರವಸೆ

ವಿಜಯಪುರ: ರಾಜಸ್ಥಾನದಲ್ಲಿ ಸೆ. 28 ರಿಂದ ಅ. 4ರ ವರೆಗೆ 19 ವರ್ಷದೊಳಗಿನ ಮಹಿಳೆಯರ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಅನ್ನಪೂರ್ಣ ಜಿ. ಭೋಸಲೆ ಅವರ ಸಾಧನೆಗೆ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ. ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

ಬಿ ಎಲ್ ಡಿ ಇ ಸಂಸ್ಥೆಯ ಎಸ್. ಎಸ್. ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುನಲ್ಲಿ ವಾಣಿಜ್ಯ ಶಾಸ್ತ್ರ ಓದುತ್ತಿರುವ ಅನ್ನಪೂರ್ಣ ಭೋಸಲೆ ಅವರ ಕ್ರಿಕೆಟ್ ಮತ್ತು ಶಿಕ್ಷಣಕ್ಕೆ ಅಗತ್ಯವಾಗಿರುವ ಸಹಕಾರ ನೀಡಲು ಸೂಚನೆ ನೀಡಿದ್ದಾರೆ ಎಂದು ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಆರ್. ವಿ. ಕುಲಕರ್ಣಿ ತಿಳಿಸಿದ್ದಾರೆ.

ಅನ್ನಪೂರ್ಣ ಭೋಸಲೆ ಈ ಮುಂಚೆ 16 ವರ್ಷದೊಳಗಿನ ಮಹಿಳೆಯ ತಂಡಕ್ಕೂ ಆಯ್ಕೆಯಾಗಿದ್ದರು. ಅಲ್ಲದೇ, ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿಯೂ ತರಬೇತಿ ಪಡೆಯುತ್ತಿದ್ದರು. ಅವರ ಕಠಿಣ ಪರಿಶ್ರಮಕ್ಕೆ ತಕ್ಕ ಪಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಅನ್ನಪೂರ್ಣ ಭೋಸಲೆ ಅವರ ಕ್ರಿಕೆಟ್ ತರಬೇತಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಅಲ್ಲದೇ, ಪದವಿ ಶಿಕ್ಷಣಕ್ಕೆ ಅಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನೂ ನೀಡುವಂತೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ. ಬಿ. ಪಾಟೀಲ ಅವರು ಸೂಚನೆ ನೀಡಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯ ತಂದೆ ಗಣೇಶ ಭೋಸಲೆ ಅವರಿಗೂ ಈ ಕುರಿತು ಭರವಸೆ ನೀಡಲಾಗಿದೆ. ವಿದ್ಯಾರ್ಥಿಯ ಕ್ರಿಕೆಟ್ ಜೀವನ ಮತ್ತಷ್ಟು ಉಜ್ವಲವಾಗಿರಲು ಎಲ್ಲ ರೀತಿಯಿಂದ ಸಹಕಾರ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದು ಡಾ. ಆರ್. ವಿ. ಕುಲಕರ್ಣಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಗಳು ಅನ್ನಪೂರ್ಣ ಭೋಸಲೆ ಅವರ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಣೇಶ ಭೋಸಲೆ, ತಮ್ಮ ಮಗಳ ಸಾಧನೆಗೆ ಬಿ ಎಲ್ ಡಿ ಇ ಸಂಸ್ಥೆ ಸದಾ ಪ್ರೋತ್ಸಾಹ ನೀಡಿ ಬೆಂಬಲಿಸಿದೆ. ಮುಂದೆಯೂ ಕ್ರಿಕೆಟ್ ವೃತ್ತಿ ಜೀವನ ಮುಂದುವರೆಸಲು ಮತ್ತು ಶಿಕ್ಷಣಕ್ಕೆ ಅಗತ್ಯವಾಗಿರುವ ಸೌಕರ್ಯಗಳನ್ನು ಒದಗಿಸುವ ಕುರಿತು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ. ಬಿ. ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಗಣೇಶ ಭೋಸಲೆ ತಿಳಿಸಿದ್ದಾರೆ.

 

Leave a Reply

ಹೊಸ ಪೋಸ್ಟ್‌