ವಿಜಯಪುರ: ಬಸವ ನಾಡಿನ ಯುವಕ ಮತ್ತು ಸಧ್ಯಕ್ಕೆ ಕೇಂದ್ರ ಸರಕಾರದಲ್ಲಿ ಎಂಜಿನಿಯರ್ ಆಗಿರುವ ಸಾಗರ ವಾಡಿ ಅವರು ಯು ಪಿ ಎಸ್ ಸಿ ಪರೀಕ್ಷೆಯಲ್ಲಿ 385ನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಣಿ ಮೂಲದವರಾದ ಮತ್ತು ಸಧ್ಯಕ್ಕೆ ವಿಜಯಪುರ ನಗರದ ಘೇವರಚಂದ ಕಾಲನಿಯಲ್ಲಿ ವಾಸಿಸುತ್ತಿರುವ ಅಮಗೊಂಡ ವಾಡಿ ಮತ್ತು ವಿಜಯಲಕ್ಷ್ಮಿ ದಂಪತಿಯ ಹಿರಿಯ ಪುತ್ರ ಸಾಗರ ವಾಡಿ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ 385ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಇವರ ತಂದೆ ಸಧ್ಯಕ್ಕೆ ದೇವರ ಹಿಪ್ಪರಗಿ ತಾಲೂಕಿನ ಕೋರವಾರದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಇವರ ಹಿರಿಯ ಪುತ್ರ ಸಾಗರ ವಾಡಿ 1ನೇ ತರಗತಿ ಶಿಕ್ಷಣವನ್ನು ಇಂಡಿ ತಾಲೂಕಿನ ಚವಡಿಹಾಳ ಸರಕಾರಿ ಶಾಲೆಯಲ್ಲಿ ಮತ್ತು 2 ರಿಂದ 5ನೇ ತರಗತಿವರೆಗೆ ಕೋರವಾರ ಸರಕಾರಿ ಶಾಲೆಯಲ್ಲಿ ಮತ್ತು 6 ರಿಂದ 12ನೇ ತರಗತಿಯ ವರೆಗೆ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿ ನವೋದಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಸೂರತ್ಕಲ್ ನಲ್ಲಿ ಎಲೆಕ್ಟಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ನಲ್ಲಿ ಬಿಟೆಕ್ ಪದವಿ ಮುಗಿಸಿದ್ದಾರೆ. ಅಲ್ಲದೇ, ಬೆಂಗಳೂರಿನಲ್ಲಿ ಕೇಂದ್ರ ಸರಕಾರದ ಪವರ ಗ್ರಿಡ್ ಎಲೆಕ್ಟ್ರಿಕಲ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಮೂರನೇ ಪ್ರಯತ್ನದಲ್ಲಿ ಸಾಗರ ವಾಡಿ ಯು ಪಿ ಎಸ್ ಸಿ ಯಲ್ಲಿ 385 ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಬಸವ ನಾಡು ವಿಜಯಪುರ ಜಿಲ್ಲೆ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಯಾವುದೇ ತರಬೇತಿ ಇಲ್ಲದೇ, ಕೇಂದ್ರ ಸರಕಾರಿ ನೌಕರನಾಗಿದ್ದುಕೊಂಡು ಈ ಸಾಧನೆ ಮಾಡುವ ಮೂಲಕ ಸಾಗರ ವಾಡಿ ಇತರ ಪ್ರತಿಭಾವಂತ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.