ಅ.1 ರಿಂದ ಚಿತ್ರಮಂದಿರ, 6 ರಿಂದ 12ನೇ ತರಗತಿ ಶಾಲೆಗಳಲ್ಲಿ ಶೇ. 100 ಭರ್ತಿಗೆ ಅವಕಾಶ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬರುವ ಅ. 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಕುರಿತಂತೆ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ ಶೇ. 0.66 ರಷ್ಟಿದೆ. ಅ. 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು. ಶೇ. 1ಕ್ಕಿಂತ ಹೆಚ್ಚಾದರೆ ಶೇ. 50 ರಷ್ಟು ಭರ್ತಿಗೆ ಹಾಗೂ ಶೇ. 2 ಕ್ಕಿಂತ ಹೆಚ್ಚಾದರೆ ಚಿತ್ರಮಂದಿರ ಬಂದ್ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಮಾನದಂಡವನ್ನು ಅನುಸರಿಸಿ ಅ. 3 ರಿಂದ ಪಬ್ ಗಳನ್ನು ತೆರೆಯಲಾಗುವುದು ಎಂದು ತಿಳಿಸಿದ ಸಿಎಂ, ಚಿತ್ರ ಮಂದಿರಗಳಲ್ಲಿ ಕನಿಷ್ಠ ಒಂದು ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ರಾತ್ರಿ ಕರ್ಫ್ಯೂ ವನ್ನು ರಾತ್ರಿ 10 ರಿಂದ ಬೆ. 5 ರ ವರೆಗೆ ನಿಗದಿ ಪಡಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

6 ರಿಂದ 12 ನೇ ತರಗತಿಗಲ್ಲಿ ಶೇ. 100 ರಷ್ಟು ಅವಕಾಶ

ಇದೇ ವೇಳೆ, 6 ರಿಂದ 12ನೇ ತರಗತಿ ವರೆಗೆ ಶೇ. 100 ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸಲಾಗುವುದು. ವಾರದಲ್ಲಿ ಐದು ದಿನ ಶಾಲೆ ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲು ಮತ್ತು ಜನರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ನಡೆಸಲು ಸೂಚಿಸಲಾಯಿತು ಎಂದು ಸಿಎಂ ತಿಳಿಸಿದರು.

 

ದಸರಾ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಗಡಿ ಭಾಗದಲ್ಲಿ ಹೆಚ್ಚು ನಿಗಾ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ನಾಯಿ ತಿಳಿಸಿದರು.

ಈ ಸಭೆಯಲ್ಲಿ ಕಂದಾಯ ಸಚಿವರಾದ ಆರ್. ಅಶೋಕ, ಆರೋಗ್ಯ ಸಚಿವ ಡಾ. ಕೆ. ಸುಧಾಕರ, ತಾಂತ್ರಿಕ ಸಲಹೆ ಸಮಿತಿ ಅಧ್ಯಕ್ಷ ಡಾ. ಸುದರ್ಶನ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌