ಡಿಸೆಂಬರ್ ವೇಳೆಗೆ ಬೆಳಗಾವಿಗೆ ಸರಕಾರಿ ಕಚೇರಿಗಳ ಸ್ಥಳಾಂತರ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ: ಅ. 3 ರಿಂದ ಸಕ್ಕರೆ ನಿರ್ದೇಶನಾಲಯ ಬೆಳಗಾವಿಯಲ್ಲಿ ಕಾರ್ಯಾರಂಭ ಮಾಡಲಿದೆ. ಡಿಸೆಂಬರ್ ವೇಳೆಗೆ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗುವುದು. ಆ ಸಂದರ್ಭದಲ್ಲಿ ಸಾಧ್ಯವಿರುವಷ್ಟು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019- 20 ನೇ ವರ್ಷದಲ್ಲಿ ಬೆಳಗಾವಿಯಲ್ಲಿ ಅತ್ಯಧಿಕ ಮಳೆಯಾಗಿ ಮನೆಗಳು ಹಾಗೂ ಬೆಳೆಗಳು ಹಾನಿಗೀಡಾಗಿವೆ ಆ ಸಂದರ್ಭದಲ್ಲಿ ಅಂದಿನ ಸಿಎಂ ಬಿ. ಎಸ್. ಯಡಿಯೂರಪ್ಪ ಹಲವು ಸೌಲಭ್ಯಗಳನ್ನು ಪ್ರಕಟಿಸಿದ್ದರು. ಒಟ್ಟು 44205 ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಾರಂಭವಾಗಿದೆ. ಎ ಮತ್ತು ಬಿ ಕೆಟಗೆರಿ ಮನೆಗಳಿಗೆ ರೂ. 718 ಕೋ., ಬಿ ಕೆಟಗರಿಗೆ ರೂ. 9.64 ಕೋ. ಮತ್ತು ಸಿ ಕೆಟಗರಿಗೆ ರೂ. 132 ಕೋ. ಸೇರಿದಂತೆ ಒಟ್ಟು ರೂ. 1864 ಕೋ. ನೀಡಲಾಗಿದೆ. ಅಲ್ಲದೇ, 1.56 ಲಕ್ಷ ರೈತರಿಗೆ ರೂ. 263 ಕೋ. ಬೆಳೆಹಾನಿ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಪರಿಹಾರ ಪಾವತಿಗೆ ತೊಡಕಿರುವ ಅಂಶಗಳ ಬಗ್ಗೆ ಕಳೆದ ಬಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಇಲಾಖೆ ಕೋರಿರುವ ವಿವರಗಳನ್ನು ಒದಗಿಸಿ ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಿ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.

ಕಬ್ಬು ಬೆಳೆಗಾರರಿಗೆ ಬಾಕಿ ಹಣ
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೆ ಸಂಬಂಧಪಟ್ಟಂತೆ ಈಗಾಗಲೇ ಮಾತುಕತೆ ನಡೆದಿದೆ. ಬಾಕಿ ಹಣವನ್ನು ನೀಡದಿದ್ದರೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವುದು. ಈ ಮಧ್ಯೆ ಸಕ್ಕರೆ ಕಾರ್ಖಾನೆಗಳು, ಸಕ್ಕರೆ ನಿರ್ದೇಶನಾಲಯ ಹಾಗೂ ಅಪೆಕ್ಸ್ ಬ್ಯಾಂಕ್ ಅವರೊಟ್ಟಿಗೆ ಮಾತುಕತೆ ನಡೆಸಿ ಹಣ ಪಾವತಿಗೆ ಕ್ರಮವಹಿಸಲಾಗುವದು ಎಂದು ಹೇಳಿದರು.

ಭಾರತ್ ಬಂದ್ ಬೇಡ
ಭಾರತ್ ಬಂದ್ ನಡೆಸುವುದು ಸೂಕ್ತವಲ್ಲ. ಕೋವಿಡ್ ನಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಆರ್ಥಿಕ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕು. ಹೀಗಾಗಿ ಭಾರತ್ ಬಂದ್ ಬೇಡ ಎಂಬ ಸಲಹೆ ನೀಡಿದರು.

ವೈರಲ್ ಜ್ವರ
ರಾಜ್ಯದಲ್ಲಿ ವೈರಲ್ ಜ್ವರದ ಬಗ್ಗೆ ಸಂಪೂರ್ಣ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ, ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 

Leave a Reply

ಹೊಸ ಪೋಸ್ಟ್‌