ಪ್ರತಿಯೊಂದು ಮಹಾನಗರಪಾಲಿಕೆಯಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ: ಬೆಳಗಾವಿಯ ಇ- ಗ್ರಂಥಾಲಯ ಕಾರ್ಯವೈಖರಿಯನ್ನು ಗಮನಿಸಿ ಅದು ಯಶಸ್ವಿಯಾದರೆ ಇದೇ ಮಾದರಿಯಲ್ಲಿ ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿ ಇ- ಗ್ರಂಥಾಲಯ ತೆರೆಯಲು ಸರಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ದೇಶಭಕ್ತ ರವೀಂದ್ರ ಕೌಶಿಕ್ ಅವರ ಹೆಸರಿನಲ್ಲಿ ಇ- ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಡಿಜಿಟಲ್ ಗ್ರಂಥಾಲಯ ಓದುಗರಿಗೆ, ಬರಹಗಾರರಿಗೆ, ಜ್ಞಾನ ಪಡೆಯಲು ಬಯಸುವವರಿಗೆ ಜ್ಞಾನದ ರಹದಾರಿಯನ್ನು ತೆರೆದಿದೆ. ಇದರಿಂದ ಡಿಜಿಟಲ್ ಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತದೆ. ಜ್ಞಾನ ನೀಡುವುದು ಮತ್ತು ಪಡೆಯುವುದು ಅತ್ಯಗತ್ಯವಾಗಿದೆ. ಜ್ಞಾನ ಮತ್ತು ಧ್ಯಾನ ಇವೆರಡು ಬದುಕಿಗೆ ಸಾರ್ಥಕತೆ ಮತ್ತು ಅರ್ಥವನ್ನು ಕೊಡುವ ಹಾಗೂ ಪರೋಪಕಾರ ಮಾಡುವ ಗುಣವನ್ನು ತೋರುವ ಪ್ರಮುಖ ಮಾರ್ಗವಾಗಿದೆ. ಜ್ಞಾನ ಮತ್ತು ಧ್ಯಾನಗಳನ್ನು ಪಡೆದು ಅದನ್ನು ಸಮಾಜಕ್ಕೆ ಹಂಚಬೇಕು ಎಂಬ ಕೆಲಸವನ್ನು ಗ್ರಂಥಾಲಯ ಮಾಡುತ್ತದೆ. ಬೆಳಗಾವಿ ಕಾಸ್ಮೋಪಾಲಿಟನ್ ನಗರ. ಇಡೀ ಭಾರತವೇ ಬೆಳಗಾವಿಯಲ್ಲಿದೆ. ಬೆಳಗಾವಿ ಜನತೆ ಕನ್ನಡ ಮತ್ತು ರಾಷ್ಟ್ರದ ಬಗ್ಗೆ ಅಭಿಮಾನವಿರುವವರು. ಸಂಕುಚಿತ ಭಾವನೆ ಮಾತ್ತು ವಿಚಾರಗಳಿಗೆ ಬೆಳಗಾವಿಯಲ್ಲಿ ಜಾಗ ಇಲ್ಲ ಎಂದು ನಿರೂಪಿಸಿದ್ದು, ಹೃದಯ ಶ್ರೀಮಂತಿಕೆ ಇರುವ ಮಹಾನಗರ ಪಾಲಿಕೆಯ ನೂತನ ಸದಸ್ಯರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಜಾತ್ಯತೀತ ಮತ್ತು ಭಾಷಾತೀತವಾಗಿ ಜನರು ಆಶೀರ್ವಾದ ಮಾಡಿದ್ದಾರೆ. ಆ ವಿಶ್ವಾಸವನ್ನು ಉಳಿಸಬೇಕು. ಮಹಾನಗರ ಪಾಲಿಕೆ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಸಿಎಂ ಹೇಳಿದರು.

ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಲಿದೆ. ನಮ್ಮ ಸರಕಾರ ಗಡಿ ಜಿಲ್ಲೆಯ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಬೆಳಗಾವಿ ಕರ್ನಾಟಕದ ಕಿರೀಟಪ್ರಾಯ ಜಿಲ್ಲೆಯಾಗಿದೆ. ಹೀಗಾಗಿ ಅದರ ಗೌರವ, ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ನಮ್ಮ ಸರಕಾರದ ಗಮನದಲ್ಲಿರುತ್ತದೆ. ಪಾಲಿಕೆಯ ಎಲ್ಲ ಕೆಲಸ ನಿಗದಿತ ಅವಧಿಯಲ್ಲಿ ಮುಗಿಯಲಿ ಹಾಗೂ ಗುಣಮಟ್ಟದಿಂದ ಕೂಡಿರಲಿ ಎಂದು ಬೊಮ್ಮಾಯಿ ಹೇಳಿದರು.

ಸ್ಮಾರ್ಟ್ ಸಿಟಿಯಲ್ಲಿ ಬೆಳಗಾವಿ ಮೊದಲ ಸ್ಥಾನ ಪಡೆಯಲಿ:

ಸ್ಮಾರ್ಟ್ ಸಿಟಿಯಲ್ಲಿ ಬೆಳಗಾವಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಳಗಾವಿ ಮೊದಲ ಸ್ಥಾನ ಪಡೆಯಬೇಕೆನ್ನುವುದು ನಮ್ಮ ಆಶಯ. ಅದಕ್ಕೆ ಪೂರಕವಾಗಿ ಎಲ್ಲ ಸಹಕಾರವನ್ನು ಸರಕಾರ ನೀಡಲಿದೆ ಎಂದು ತಿಳಿಸಿದ ಅವರು, ಅಭಯ್ ಪಾಟೀಲ್ ಮತ್ತು ಅನಿಲ್ ಬೆಣಕೆ ಅವರಂಥ ಶಾಸಕರಿದ್ದಾಗ ಬೆಳಗಾವಿ ಮೊದಲ ಸ್ಥಾನ ಪಡೆಯಬೇಕು. ಅವರ ವೇಗಕ್ಕೆ ತಕ್ಕ ಹಾಗೆ ಕೆಲಸ ಮಾಡಲಾಗುವುದು. ಬೆಳಗಾವಿ ಜಿಲ್ಲೆಯ ನಾಯಕರಿಂದ ಕೂಡಿರುವ ಜಿಲ್ಲೆ. ಶಿಕ್ಷಣ ತಜ್ಞರು, ಕಾರ್ಖಾನೆಗಳ ಮಾಲೀಕರು ಇದ್ದಾರೆ. ಗೋವಿಂದ ಕಾರಜೋಳ ಅವರಂಥ ಹಿರಿಯರ ಅನುಭವದ ಮಾರ್ಗದರ್ಶನ ದೊರಕುತ್ತಿದೆ. ಬೆಳಗಾವಿ ನಗರಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಗೆ ಯಶಸ್ಸು ಸಿಗಲು ಗೋವಿಂದ ಕಾರಜೋಳ ಅವರ ಪಾತ್ರ ಮಹತ್ವದ್ದು. ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಾರೆ. ಕೆ ಎಲ್ ಇ ಸೊಸೈಟಿಯ ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಇಡೀ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿಯಾಗಿದೆ. ಬೆಳಗಾವಿ ನಗರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅದರ ಹಿಂದೆ ಕವಟಗಿಮಠ ಅವರಿದ್ದಾರೆ ಎಂದು ಹೇಳಿದರು.

ದೇಶಭಕ್ತ ರವೀಂದ್ರ ಕೌಶಿಕ್ ಅವರ ಸಾಹಸಮಯ ಜೀವನ, ಅವರ ನೋವು, ಯಾತನೆ, ಸಹನಾ ಶಕ್ತಿ ಅಪಾರ. ಅವರ ನೆನಪಿನಲ್ಲಿ ರೂ. 2.50 ಕೋ. ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಮಾಡಿರುವುದು ಅತ್ಯಂತ ಯೋಗ್ಯವಾಗಿದೆ ಎಂದು ಅವರು ತಿಳಿಸಿದರು.

ಅಭಯ ಪಾಟೀಲ ಅವರೊಡನೆ ಕಳೆದ 15 ವರ್ಷಗಳಿಂದ ತಾವು ಹೊಂದಿರುವ ಒಡನಾಟವನ್ನು ಸ್ಮರಿಸಿದ ಮುಖ್ಯಮಂತ್ರಿಗಳು, 2004 ರಲ್ಲಿ ಗ್ರಾಮವೊಂದರ ವಿಶೇಷವಾಗಿ ಅಭಿವೃದ್ಧಿ ಮಾಡಿ, ಜನರ ಸಹಭಾಗಿತ್ವದಲ್ಲಿ ಎಲ್ಲ ಸವಲತ್ತುಗಳನ್ನು ಒದಗಿಸಿದ್ದರು. ಬೆಳಗಾವಿ ನಗರದಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಿ, ಹಬ್ಬದ ಆಚರಣೆ ಮಾಡುತ್ತಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ಸಚಿವ ಭೈರತಿ ಬಸವರಾಜ, ಗೋವಿಂದ ಕಾರಜೋಳ, ವಿಧಾನ ಪರಿಷತ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌