ಹುಬ್ಬಳ್ಳಿ: ಕೊರೊನಾ ಮತ್ತು ಲಾಕಡೌನ್ ನಂತರ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವಾಗ ಬಂದ್ ಆಚರಣೆ ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಸಿಎಂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು.
ರೈತ ಸಂಘಟನೆ ಭಾರತ ಬಂದ್ ಗೆ ಕರೆ ನೀಡಿದೆ. ಆದರೆ, ಈಗಷ್ಟೇ ಜನಜೀವನ ಕೊರೊನಾ ಮತ್ತು ಲಾಕಡೌನ್ ನಿಂದ ಸಹಜ ಸ್ಥಿತಿಗೆ ಮರಳುತ್ತಿದೆ. ವ್ಯಾಪಾರ ವಹಿವಾಟುಗಳು ಸಹಜವಾಗಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ಬಂದ್ ಗೆ ಕರೆ ನೀಡುವುದು ಸರಿಯಲ್ಲ ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಈಗಾಗಲೇ ಸದನದಲ್ಲಿ ಉತ್ತರಿಸಿದ್ದೇನೆ. ಅವರೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ ಎಂದು ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ
ಭಾರತೀಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನೂತನ ಶಿಕ್ಷಣ ನೀತಿ ಕುರಿತು ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಲಯದ ಮೂರು ವರ್ಷಗಳ ಕಾಲ ಚರ್ಚಿಸಿ ಸಮಗ್ರವಾಗಿ ರೂಪಿಸಲಾಗಿದೆ. 21ನೇ ಶತಮಾನಕ್ಕೆ ತಕ್ಕಂತೆ ದೇಶದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದ ಪೈಪೋಟಿಗೆ ಸಿದ್ದಪಡಿಸುವುದು, ಕೌಶಲ್ಯವನ್ನು ಹೆಚ್ಚಿಸವುದು ಶಿಕ್ಷಣ ನೀತಿಯ ಉದ್ದೇಶವಾಗಿದೆ. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವನ್ನು ಕೈಗೊಂಡಿದ್ದಾರೆ. ಭಾರತೀಯರಿಂದ ಭಾರತೀಯ ಮಕ್ಕಳಿಗಾಗಿ ರೂಪಿಸಿರುವ ಶಿಕ್ಷಣ ವ್ಯವಸ್ಥೆ ಇದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಮುರಗೇಶ್ ನಿರಾಣಿ, ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಭುರಾಮ ಮುಂತಾದವರು ಉಪಸ್ಥಿತರಿದ್ದರು.