ಹದಗೆಟ್ಟ ರಸ್ತೆ ದುರಸ್ಥಿ ಮಾಡಲು ಜೆಸಿಬಿ, ರೋಡ್ ರೋಲರ್ ಜೊತೆ ಬಂದ ಕಾಂಗ್ರೆಸ್ಸಿಗರು- ಕಸಿವಿಸಿಗೊಂಡು ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನೆ ತಡೆದ ಮಹಾನಗರ ಪಾಲಿಕೆ ಆಯುಕ್ತರು

ವಿಜಯಪುರ: ಹದಗೆಟ್ಟಿರುವ ರಸ್ತೆಗಳಿಂದ ಗುಮ್ಮಟ ನಗರಿಯ ಜನತೆ ಬೇಸತ್ತು ಹೋಗಿದ್ದಾರೆ. ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಮಳೆ ಬಂದರಂತೂ ಈ ಗುಂಡಿಗಳು ಕಾಣಿಸದೇ ವಾಹನ ಸವಾರರು ಪರದಾಡುವಂತಾಗಿದೆ. ಹಲವಾರು ಬಾರಿ ಅಪಘಾತಗಳೂ ಸಂಭವಿಸಿವೆ. ಇದರಿಂದ ಬೇಸತ್ತ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುಮ್ಮಟ ನಗರಿ ವಿಜಯಪುರದಲ್ಲಿ ರಸ್ತೆ ದುರಸ್ಥಿಗೆ ಮುಂದಾದ ಘಟನೆ ನಡೆದಿದೆ.

ಐತಿಹಾಸಿಕ ಗೋಳಗುಮ್ಮಟ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಜೆಸಿಬಿ ಮತ್ತು ರೋಡ್ ರೋಲರ್ ಮತ್ತು ವೆಟ್ ಮಿಕ್ಸ್ ಜೊತೆ ಆಗಮಿಸಿದ್ದ ಅಬ್ದುಲ್ ಹಮೀದ್ ಮುಶ್ರಿಫ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವಿಷಯ ಮುಂಚಿತವಾಗಿಯೇ ತಿಳಿದಿದ್ದ ಪೊಲೀಸರು ಸ್ಥಳದಲ್ಲಿ ಬಿಗೀ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

 

ಇನ್ನೇನು ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕೆ ದೌಡಾಯಿಸಿದ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಕಾಂಗ್ರೆಸ್ ಕಾರ್ಯಕರ್ತರ ಕಾರ್ಯದಿಂದ ಕಸಿವಿಸಿಕೊಂಡಿದ್ದ ಮಹಾನಗರ ಪಾಲಿಕೆ ಆಯುಕ್ತರು, ಅಬ್ದುಲ್ ಹಮೀದ್ ಮುಶ್ರಿಫ್ ಅವರಿಗೆ ಮನವೊಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಮೀದ್ ಮುಶ್ರಿಫ್, ಹದಗೆಟ್ಟಿರುವ ರಸ್ತೆಗಳ ದುರಸ್ಥಿಗಾಗಿ ಆಗ್ರಹಿಸಿ ಕಳೆದ ವರ್ಷ ಸ್ವಂತ ಖರ್ಚಿನಲ್ಲಿ ಗರಸು ಮಣ್ಣನ್ನು ಹಾಕಿ ರಸ್ತೆಗಳಲ್ಲಿದ್ದ ಗುಂಡಿಗಳನ್ನು ಮುಚ್ಚಿದ್ದೇವೆ. ಈ ಬಾರಿಯೂ ಜನರ ಸಂಚಾರದ ಪರದಾಟ ನೋಡಲಾಗದೇ ಈ ಬಾರಿ ರಸ್ತೆ ದುರಸ್ಥಿ ಮಾಡಲು ಜೆಸಿಬಿ ಯಂತ್ರ, ರೋಡ್ ರೋಲರ್ ಮತ್ತು ವೆಟ್ ಮಿಕ್ಸ್ ತಂದಿದ್ದೇವೆ. ಈ ಬಾರಿಯೂ ಹಲವಾರು ಸಲ ಪ್ರತಿಭಟನೆ ನಡೆಸಿದರೂ ಮಹಾನಗರ ಪಾಲಿಕೆ ಸ್ಪಂದಿಸುತ್ತಿಲ್ಲ. ಹದಗೆಟ್ಟಿರುವ ರಸ್ತೆಗಳಿಂದಾಗಿ ಅಟೋ ಚಾಲಕರು, ವಾಹನ ಚಾಲಕರು ತಂತಮ ವಾಹನಗಳನ್ನು ಚಲಾಯಿಸುವುದು ಕಷ್ಟವಾಗಿದೆ. ಹಲವಾರು ಬಾರಿ ಅಪಘಾತಗಳಾಗಿ ಸಾರ್ವಜನಿಕರು ಗಾಯಗೊಳ್ಳುತ್ತಿದ್ದಾರೆ. ಇದರಿಂದ ರೋಸಿ ಹೋಗಿ ಈಗ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಿರುವುದಾಗಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ಗೋಲಗುಂಬಜ್ ಹತ್ತಿರ ಇರುವ ಪೋಸ್ಟ್ ಆಫೀಸ್ ರಸ್ತೆಯಿಂದ ಹಿಡಿದು ಅಂಬೇಡ್ಕರ ವೃತ್ತದ ವರೆಗೆ ಮತ್ತು ಬಸ್ ನಿಲ್ದಾಣದಿಂದ ಹಿಡಿದು ಬಾಗಲಕೋಟ ರಸ್ತೆ, ಬಸವನ ಬಾಗೇವಾಡಿ ರಸ್ತೆ, ಕೆ ಸಿ ಮಾರ್ಕೆಟ್ ರಸ್ತೆ ಸೇರಿದಂತೆ ವಿಜಯಪುರ ನಗರದ ನಗರದ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚಿ ದುರಸ್ತಿ ಕಾರ್ಯವನ್ನು ನಡೆಸುವ ಉದ್ದೇಶವಿತ್ತು. ಆದರೆ, ಮಹಾನಗರ ಪಾಲಿಕೆ ಆಯುಕ್ತರ ಭರವಸೆ ಹಿನ್ನೆಲೆಯಲ್ಲಿ ಈಗ ಪ್ರತಿಭಟನೆಯನ್ನು ಹಿಂಪಡೆಯುತ್ತಿರುವುದಾಗಿ ಅಬ್ದುಲ್ ಹಮೀದ್ ಮುಶ್ರಿಫ್ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಈಗ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆ ನಿಂತ ಮೇಲೆ ಒಂದು ವಾರದಲ್ಲಿ ವಿಜಯಪುರ ಮಹಾನಗರ ಪಾಲಿಕೆ ವತಿಯಿಂದ ಗುಮ್ಮಟ ನಗರಿಯಲ್ಲಿರುವ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುವುದು. ಅಲ್ಲದೇ, ಒಂದು ತಿಂಗಳಲ್ಲಿ ಈ ಕಾಮಗಾರಿಗಳು ಪೂರ್ಣವಾಗಲಿವೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತರ ಭರವಸೆ ಹಿನ್ನೆಲೆಯಲ್ಲಿ ಮತ್ತು ರಸ್ತೆ ಗುಂಡಿಗಳನ್ನು ಮುಚ್ಚಲು ಪೊಲೀಸರೂ ಕೂಡ ಅವಕಾಶ ನೀಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಂದು ತಿಂಗಳ ಗಡುವು ನೀಡಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜ್ಯನಾಥ ಕರ್ಫೂರಮಠ, ಚಾಂದಸಾಬ ಗದ್ವಾಲ, ರಫೀಕ್ ಅಹಮದ್ ಟಪಾಲ, ಇರ್ಫಾನ ಶೇಖ, ಶಬ್ಬಿರ್ ಜಾಗೀರದಾರ, ಅಸ್ಫಾಕ್ ಮನಗೂಳಿ, ಎಂ. ಕೆ. ತಾಂಬೋಳಿ, ಅಬ್ದುಲ ರಜಾಕ್ ಹೊರ್ತಿ, ಗಂಗೂಬಾಯಿ ಚೋಳಕೆ, ಆಸಮಾ ಕಾಲೆಬಾಗ, ಶಕೀಲ ಸುತಾರ, ಅಯೂಬ್ ಭಕ್ಷಿ, ಇಲಿಯಾಸ ಸಿದ್ದಿಕಿ, ಸಿದ್ದು ಛಾಯಾಗೋಳ, ಇದ್ರುಷ ಭಕ್ಷಿ, ಭಾರತಿ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌