ಟಿಕಾಯತ್ ಪಾಕಿಸ್ತಾನದ ಏಜೆಂಟ್- ಕಾಂಗ್ರೆಸ್ ತಾಲಿಬಾನದ ಪ್ರತಿರೂಪ- ಸಿದ್ಧರಾಮಯ್ಯ ಟಿಪ್ಪು ಸುಲ್ತಾನ್ ವಂಶಸ್ಥರು- ಯತ್ನಾಳ ವಾಗ್ದಾಳಿ

ವಿಜಯಪುರ: ಸಿದ್ಧರಾಮಯ್ಯ ಟಿಪ್ಪು ಸುಲ್ತಾನ ವಂಶಸ್ಥರು. ಧರ್ಮ, ದೇಶ, ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಕೇವಲ ಸ್ವಾರ್ಥಕ್ಕಾಗಿ, ಮತಬ್ಯಾಂಕ್ ಗಾಗಿ ಒಂದು ಸಮುದಾಯವನ್ನು ಸಂತೃಪ್ತಗೊಳಿಸಲು ಅವಹೇಳನಕಾರಿಯಾಗಿ ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ಅವರು ಓರ್ವ ಮಾಜಿ ಸಿಎಂ, ಪ್ರತಿಪಕ್ಷದ ನಾಯಕರಾಗಿದ್ದಾರೆ. ಅವರ ಗೌರವಕ್ಕೆ ತಕ್ಕಂತೆ ನಡೆಯಬೇಕು. ತಾಲಿಬಾನಿಗಳೇನಿದ್ದರೂ ಕಾಂಗ್ರೆಸ್ಸಿನಲ್ಲಿದ್ದಾರೆ. ಕಾಂಗ್ರೆಸ್ ತಾಲಿಬಾನ್ ಪ್ರತಿರೂಪವಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದಾರೆ

ವಿಜಯಪುರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ಬಿಜೆಪಿಯವರು ಹಿಟ್ಲರ್ ವಂಶಸ್ಥರು ಎಂದು ಟೀಕಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿಗರು ಕಾಶ್ಮೀರ ವಿಚಾರದಲ್ಲಿ ಸರಕಾರಕ್ಕೆ ಬೆಂಬಲ ನೀಡಲಿಲ್ಲ? ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಮತ್ತೆ 370 ಕಲಂ ಜಾರಿ ಮಾಡುತ್ತೇವೆ ಎಂದು ಹೇಳುತ್ತಾರೆ. ಇವರಿದೆ ದೇಶ, ಹಿಂದೂ ಧರ್ಮ ಯಾವುದೂ ಬೇಕಿಲ್ಲ. ಕಾಂಗ್ರೆಸ್ ಇಂದು ಪಾಕಿಸ್ತಾನ ಪಾರ್ಟಿಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಪಾಕಿಸ್ತಾನದ ಇಮ್ರಾನಖಾನ್ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇವರೆಲ್ಲ ನಮ್ಮ ದೇಶದ ಛೋಟಾ ಇಮ್ರಾನಖಾನ್ ಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಮಾರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೋದಿಯವುರ ಯಾವ ಕಾರಣಕ್ಕೆ ದೇಶ ಮಾರಬೇಕು? ಅವರದೇನು ಸಂಸಾರವಿದೆಯಾ? ರಾಹುಲ್ ಗಾಂಧಿ ಅವರ ಮನೆತನ, ಇಟಲಿಯಿಂದ ಬಂದಿರುವ ಒಂದು ಕುಟುಂಬ ಇಡೀ ದೇಶವನ್ನು ಲೂಟಿ ಮಾಡಿದೆ. ಜವಾಹರಲಾಲ ನೆಹರೂ ಅವರಿಂದ ಹಿಡಿದು ಈ ದೇಶ ಲೂಟಿ ಮಾಡುತ್ತ ಬಂದಿದ್ದಾರೆ. ಅವರಿಗೆ ದೇಶದ ಬಗ್ಗೆ ಭಕ್ತಿ ಇಲ್ಲ. ಶ್ರದ್ಧೆ ಇಲ್ಲ. ಭಾರತದ ಬಗ್ಗೆ ಗೌರವವಿಲ್ಲ. ಯಾವ ವಿಷಯ ಮಾತನಾಡಬೇಕು ಎಂಬುದರ ಬಗ್ಗೆ ಕನಿಷ್ಠ ಪರಿಜ್ಞಾನವಿಲ್ಲದೇ ನಗೆಪಾಟಲಿಗೀಡಾಗುತ್ತಿದ್ದಾರೆ. ಅವರು ಪಾಕಿಸ್ತಾನದ ಏಜೆಂಟರು ಎಂದು ಕಾಂಗ್ರೆಸ್ಸಿನಲ್ಲಿ ಮೌನವಾಗಿರುವ ದೇಶಭಕ್ತ ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ. ದೇಶಕ್ಕೆ ಅನ್ಯಾಯವಾದಾಗ ಮಾತನಾಡುವ ಧೈರ್ಯ ಮಾಡದೇ ಕಾಂಗ್ರೆಸ್ಸಿನಲ್ಲಿ ಗುಲಾಮಗಿರಿಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಕೃಷಿ ಕಾನೂನುಗಳು ರೈತ ಪರವಾಗಿವೆ. ಪಂಜಾಬ ಬಿಟ್ಟರೆ ಬೇರೆ ಎಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿಲ್ಲ. ಪಂಜಾಬಿನಲ್ಲಿ ಒಂದು ದೊಡ್ಡ ಲಾಬಿ ಇದೆ. ಅಲ್ಲಿ ದೊಡ್ಡ ಜಾಲ ಇದೆ. ಪಂಜಾಬ ಹೊರತು ಪಡಿಸಿ ಇಡೀ ದೇಶದಲ್ಲಿ ಯಾವ ರೈತರೂ ಪ್ರಧಾನಿ ನಿರ್ಣಯದ ಬಗ್ಗೆ ಅಸಮಾಧಾನ ಹೊಂದಿಲ್ಲ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರತ ಬಂದ್ ವಿಫಲವಾಗಿದೆ. ಇಂದು ಬಂದ್ ವಿಫಲವಾಗಿರುವುದು ಮೋದಿ ಮತ್ತು ಕೇಂದ್ರ ಸರಕಾರದ ಬಗ್ಗೆ ಕೆಲವು ರೈತರಲ್ಲಿದ್ದ ಗೊಂದಲ ನಿವಾರಣಿಗೆ ಸ್ಪಷ್ಟ ಸಂದೇಶ ನೀಡಿದೆ. ಈಗ ನಡೆದಿರುವ ಹೋರಾಟ ನಕಲಿ ಹೋರಾಟಗಾರರಿಂದ ಕೂಡಿದೆ. ಅವರ ಉಪಜೀವನ ಈ ಹೋರಾಟದಿಂದ ನಡೆದಿದೆ. ಸಾರಿಗೆ ಸಂಸ್ಥೆಗಳ ನೌಕರರು ಈ ಹಿಂದೆ ತಪ್ಪು ಮಾರ್ಗದರ್ಶನದಿಂದ ಹಾದಿ ತಪ್ಪಿದ್ದರು. ನಮ್ಮ ದೇಶದಲ್ಲಿ ಕೆಲವು ಜನರು ಆಂತರಿಕ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದಾರೆ. ಟಿಕಾಯತ್ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ದೇಶದಲ್ಲಿ ರೈತರ ಹೆಸರಿನಲ್ಲಿ ದಂಗೆ ಮತ್ತು ದೋಂಬಿ ಎಬ್ಬಿಸಬೇಕು. ಭಾರತವನ್ನು ಅಸ್ಥಿರ ಮಾಡಬೇಕು ಮತ್ತು ಜಗತ್ತಿನಲ್ಲಿ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

Leave a Reply

ಹೊಸ ಪೋಸ್ಟ್‌