ಅ. 30ಕ್ಕೆ ಸಿಂದಗಿ, ಹಾನಗಲ್ ಬೈ ಎಲೆಕ್ಷನ್ ಮುಹೂರ್ತ ಫಿಕ್ಸ್

ನವದೆಹಲಿ: ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ ಬೈ ಎಲೆಕ್ಷನ್ ಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.

ಕರ್ನಾಟಕದ ಸಿಂದಗಿ ಮತ್ತು ಹಾನಗಲ್ ವಿಧಾನಸಭೆ ಸೇರಿದಂತೆ ದೇಶದ ಒಟ್ಟು 30 ವಿಧಾನಸಭೆ ಮತ್ತು ಮೂರು ಲೋಕಸಭೆ ಬೈ ಎಲೆಕ್ಷನ್‍ಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಅ.1ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಅ.8 ರವೆರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಅ.11ರಂದು ನಾಮಪತ್ರಗಳ ಪರಿಷ್ಕರಣೆ ನಡೆಯಲಿದ್ದು, ಅ.13 ರಂದು ನಾಮಪತ್ರ ಹಿಂಪಡೆಯಲು ಕೊನೆಯದಿನವಾಗಿದೆ.

ಅ.30 ರಂದು ಮತದಾನ ನಡೆಯಲಿದ್ದು, ನ.2 ರಂದು ಮತ ಎಣಿಕೆ ನಡೆಯಲಿದೆ.

ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ನಿಧನದಿಂದಾಗಿ ಬಸವನಾಡು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಇದರ ಜೊತೆಯಲ್ಲಿಯೇ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೂ ಬೈ ಎಲೆಕ್ಷನ್ ನಡೆಯಲಿದೆ. ಮಾಜಿ ಸಚಿವ ಸಿ.ಎಂ.ಉದಾಸಿ ಅವರ ನಿಧನದಿಂದಾಗಿ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆಯುತ್ತಿದೆ.

ಸಿಂದಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಘೋಷಣೆ ಮಾಡಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ.

ಹಾನಗಲ್ ಬೈ ಎಲೆಕ್ಷನ್‍ಗೆ ಯಾವ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ.

Leave a Reply

ಹೊಸ ಪೋಸ್ಟ್‌