ಬಿಜೆಪಿ ಸಂಸದ ರಮೇಶ ಜಿಗಜಿಣಗಿ ನೋವಿನ ಮಾತು- ಎಲ್ಲಿ ಮತ್ತು ಯಾಕೆ ಗೊತ್ತಾ?

ವಿಜಯಪುರ: ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೆಚ್ಚು ಮಾತನಾಡುವುದಿಲ್ಲ. ಅದರೆ, ಮಾತನಾಡಿದರೆ ಅದರ ಹಿಂದೆ ಉದ್ದೇಶವಂತೂ ಇದ್ದೇ ಇರುತ್ತದೆ. ಕೇಂದ್ರದಲ್ಲಿ ಸಚಿವ ಸ್ಥಾನ ತಪ್ಪಿದರೂ ಕ್ಯಾರೆ ಎನ್ನದ ರಮೇಶ ಜಿಗಜಿಣಗಿ ಈಗ ಮಾತ್ರ ಬಹಳ ಸೂಕ್ಷ್ಮವಾಗಿಯೇ ಬಿಜೆಪಿ ಹಿರಿಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಅವರು ಮಾತನಾಡಿರುವ ಶಬ್ದಗಳು ಸೂಕ್ಷವಾಗಿದ್ದರೂ ಹಿರಿಯ ಮತ್ತು ದಲಿತ ಸಂಸದರಾಗಿ ಇವರು ಆಡಿರುವ ಮಾತುಗಳು ಬಿಜೆಪಿಗೆ ಬಿಸಿತುಪ್ಪ ಆಗುವುದಂತೂ ಸುಳ್ಳಲ್ಲ.

ವಿಜಯಪುರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪಾಲ್ಗೊಂಡಿದ್ದ ಸಭೆಯಲ್ಲಿ ನೇರಾನೇರ ಮಾತನಾಡಿದ ರಮೇಶ ಜಿಗಜಿಣಗಿ ತಾವು 45 ವರ್ಷ ಸಕ್ರೀಯ ರಾಜಕಾರಣದಲ್ಲಿದ್ದು‌, ಬಿಜೆಪಿಗೆ ಬಂದು 17 ವರ್ಷ ಕಳೆದರೂ ತಮ್ಮ ಸಾಮರ್ಥ್ಯವನ್ನು ಹೈಕಮಾಂಡ ಬಳಸಿಕೊಳ್ಳದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆಯಷ್ಟೇ ಕೇಂದ್ರ ಚುಬಾವಣೆ ಆಯೋಗ, ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ದಿನಾಂಗ ಪ್ರಕಟಿಸಿದೆ.

ಈ ಘೋಷಣೆ ಬೆನ್ನಲ್ಲೆ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೈಕಮಾಂಡ್ ವಿರುದ್ಧ ತಮ್ಮ ನೋವು ತೋಡಿಕೊಂಡಿದ್ದಾರೆ. ವಿಜಯಪುರದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಪಕ್ಷ ನನ್ನನ್ನ ಯಾಕೆ ಬಳಸಿಕೊಳ್ತಿಲ್ಲ ಎಂದು ಪ್ರಶ್ನಿಸಿದ ಅವರು, ನನ್ನ ಅಭಿಪ್ರಾಯ ಪಕ್ಷದ ವರಿಷ್ಠರಿಗೆ ತಿಳಿಸಲೇಬೇಕು ಎಂದು ವೇದಿಕೆಯಲ್ಲಿ ಆಗ್ರಹಿಸಿದರು. ನೀನೊಬ್ಬ ಲೋಕಸಭೆ ಸದಸ್ಯನಾಗಿ ಜವಾಬ್ದಾರಿ ಕೆಲಸ ಮಾಡು ಅಂತಾ ಯಾವೊಬ್ಬ ನಾಯಕನೂ ನನಗೆ ಕರೆದಿಲ್ಲ. ನಾನು ಪಕ್ಷಕ್ಕೆ ಬಂದು 17 ವರ್ಷವಾದರೂ ಯಾವ ನಾಯಕನೂ ನನಗೆ ಜವಾಬ್ದಾರಿ ನೀಡಿಲ್ಲ ಎಂದು ಅಸನಾಧಾನ ವ್ಯಕ್ತಪಡಿಸಿದರು.

ಪಕ್ಷದಲ್ಲಿ ನನಗೆ ನೋವಾಗುತ್ತಿದೆ. ಬಿಜೆಪಿಗೆ ಬಂದು 17 ವರ್ಷ ಕಳೆದಿವೆ. ಆದರೂ ಜವಾಬ್ದಾರಿಯಿಂದ ಕೆಲಸ ಮಾಡು ಎಂದು ನಾಯಕರು ಹೇಳಿಲ್ಲ. ಆದರೂ ನಾನು ಎಲ್ಲವನ್ನು ಸಹಿಸಿಕೊಂಡು ಬಂದಿದ್ದೇನೆ ಎಂದು ದಲಿತ ಹಿರಿಯ ಸಂಸದರೂ ಆಗಿರುವ ರಮೇಶ ಜಿಗಜಿಣಗಿ ತಮ್ಮ ತೀವ್ರ ಅಸಮಾಧಾನ ಹೊರ ಹಾಕಿದರು.

ನಾನು ಪಕ್ಷವನ್ನ ಕೆಳಗಿಟ್ಟು ಎಂದು ಮಾತಾಡಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನನಗೂ ವಯಸ್ಸಾಗಿದೆ. ನಾನು ಕಾರ್ಯಕರ್ತರ ಜೊತೆಗೆ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಅವರು ನೊಂದುಕೊಂಡು ಮಾತನಾಡಿದರು.

ನನಗೇನು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇಲ್ಲ. 45 ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದರೂ ಯಾವುದೇ ಉದ್ಯಮ ನಡೆಸುತ್ತಿಲ್ಲ. ರಾಜಕಾರಣ ಬಿಟ್ಟರೆ ಹೊಲದಲ್ಲಿ ಕೃಷಿ ಮಾಡುತ್ತಿದ್ದೇನೆ. ಆದರೆ, ಬಿಜೆಪಿಗೆ ಬಂದು 17 ವರ್ಷಗಳಾದರೂ ಯಾವುದೇ ಜವಾಬ್ದಾರಿ ನೀಡಿಲ್ಲ. ಹೀಗಾಗಿ ಈ ಸಂದೇಶವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಹೈಕಮಾಂಡಿಗೆ ತಲುಪಿಸಲು ನನ್ನ ನೋವು ಹೇಳಿಕೊಂಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ನಾನು ಬೇಡವಾಗಿದ್ದರೆ ನೇರವಾಗಿ ಬೇಡ ಎಂದು ಹೇಳಲಿ ಎಂದು ಸಂಸದ ರಮೇಶ ಜಿಗಜಿಣಗಿ ನೀಡಿದ ಹೇಳಿಕೆ ಸಿಂದಗಿ ಮತ್ತು ಹಾನಗಲ್ ಬೈ ಎಲೆಕ್ಷನ್ ಸಂದರ್ಭದಲ್ಲಿ ಬಿಜೆಪಿ ನಾಯಕರಲ್ಲಿ ಸಂಚಲನ ಮೂಡಿಸಿದೆ.

ಬಿಜೆಪಿ ಪ್ರಬಲ ದಲಿತ ನಾಯಕರಾಗಿರುವ ಸಂಸದ ರಮೇಶ ಜಿಗಜಿಣಗಿ ಸತತ ನಾಲ್ಕನೇ ಬಾರಿಗೆ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ತಾವು ಸತತವಾಗಿ ಚುನಾವಣೆಯಲ್ಲಿ ಗೆಲ್ಲುತ್ತ ಬಂದಿದ್ದರೂ ಅವರಿಗೆ ಈವರೆಗೆ ಒಂದು ಸಲ ಕೇಂದ್ರದಲ್ಲಿ ಸಹಾಯಕ ಸಚಿವ ಸ್ಥಾನ ಬಿಟ್ಟರೆ ಬಿಜೆಪಿ ಹೈಕಮಾಂಡ್ ಬೇರಾವ ಜವಾಬ್ದಾರಿ ನೀಡದಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಈಗ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ನಾಯಕರು ಕೈಗೊಳ್ಳುವ ನಿರ್ಧಾರ ಕುತೂಹಲ ಮೂಡಿಸಿದೆ.

Leave a Reply

ಹೊಸ ಪೋಸ್ಟ್‌