ವಿಜಯಪುರ: ಸರಕಾರ ಪ್ರಸಕ್ತ ವರ್ಷದ ಶಾಲೆ-ಕಾಲೇಜುಗಳನ್ನು ಆರಂಬಿಸಲು ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಕೊರೊನಾ ನಿಯಮಾವಳಿ ಪಾಲನೆ ಅಂದರೆ ಎಸ್ಓಪಿ ಪಾಲನೆ ಕುರಿತು ವಿಜಯಪುರ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಿಗಾರ ಮತ್ತು ಲೋಕಾಯುಕ್ತ ಸಿಪಿಐ ಆನಂದ ಠಕ್ಕನ್ನವರ ನಾನಾ ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತರ ಆದೇಶದ ಹಿನ್ನೆಲೆಯಲ್ಲಿ ಈ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಸರಕಾರಿ ಶಾಲೆ- ಕಾಲೇಜುಗಳಲ್ಲಿ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲನೆಯಾಗುತ್ತಿರುವ ಕುರಿತು ಪರಿಶೀಲನೆ ನಡೆಸಿದರು. ಅಲ್ಲದೇ, ಲೋಪದೋಷವಾದರೆ ವರದಿಯನ್ನು ಕಳುಹಿಸಿ ಕೊಡಲಾಗವುದು ಎಂದು ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.
ವಿಜಯಪುರ ತಾಲೂಕಿನ ಅರಕೇರಿ, ಮದಭಾವಿ, ಬುರಣಾಪೂರ ಹಾಗೂ ಇಟ್ಟಂಗಿಹಾಳ ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಕಚೇರಿಯ ಸಿಬ್ಬಂದಿಯಾದ ಎಸ್. ಟಿ. ಕಟೆ, ಮಹಾದೇವ ಖಂಡಕಾರ, ಅರುಣಕುಮಾರ ಪವಾರ ಮುಂತಾದವರು ಉಪಸ್ಥಿತರಿದ್ದರು.