ಅಥಣಿಯಲ್ಲಿ ಪೊಲೀಸರ ಅಂಧಾ ದರ್ಬಾರ? ಪೊಲೀಸ್ ERSS 112 ಕಾರು ಢಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ತಾಯಿ ಮಗನ ವಿರುದ್ಧವೇ ಕೇಸ್- ಗಾಯಾಳುಗಳಿಂದ ದೂರು ಪಡೆಯಲು ಹಿಂದೇಟು ಆರೋಪ

ಅಥಣಿ: ಇದು ಸಾರ್ವಜನಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರ ಇನ್ನೋಂದು ಮುಖವಾಡಕ್ಕೆ ಸಾಕ್ಷಿಯಾಗಿರುವ ಘಟನೆ. ಈ ಘಟನೆಯಲ್ಲಿ ಪೊಲೀಸರ ಕಾರು ಬೈಕಿಗೆ ಢಿಕ್ಕಿ ಹೊಡೆದು ತಾಯಿ-ಮಗ ಗಂಭೀರವಾಗಿ ಗಾಯಗೊಂಡಿದ್ದರೂ ಪೊಲೀಸರು ಗಾಯಾಳುಗಳ ವಿರುದ್ಧವೇ ಕೇಸ್ ದಾಖಲಿಸಿ ಕೈತೊಳೆದುಕೊಂಡಿದ್ದಾರೆ.

 

ಅಷ್ಟಕ್ಕೂ ಆಗಿದ್ದೇನೆಂದರೆ, ಸೋಮವಾರ ಮ. 12.30 ಸುಮಾರಿಗೆ ಸಂಕೋನಟ್ಟಿ ಗ್ರಾಮದ ತೋಟದ ವಸ್ತಿಯಿಂದ ತಾಯಿ ಸುಮಾರು 60 ವರ್ಷದ ವತ್ಸಲಾ ಶಂಕರ ಮುಗ್ದುಮ ಮತ್ತು ಸುಮಾರು 45 ವರ್ಷದ ಮಗ ಗುರುಲಿಂಗ ಮುಗ್ದುಮ ಬೈಕಿನಲ್ಲಿ ಅಥಣಿಯ ಕಡೆಗೆ ಹೊರಟಿದ್ದರು. ಅದೇ ವೇಳೆ, ಸತ್ತಿ ಕಡೆಯಿಂದ ಅಥಣಿ ಕಡೆಗೆ ಅತೀ ವೇಗವಾಗಿ ಹೋಗುತ್ತಿದ್ದ ಹೆದ್ದಾರಿ ಪೆಟ್ರೋಲಿಂಗ್ ಪೊಲೀಸ್ ಕಾರು ಈ ಬೈಕಿಗೆ ಹಿಂಬದಿಯಿಂದ ಭೀಕರವಾಗಿ ಢಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ತಾಯಿ ಮತ್ತು ಮಗ ಸ್ಥಳದಲ್ಲಿಯೇ ಬಿದ್ದು ಗಂಭೀರವಾಗಿ ಗಾಯಗೊಂಡು ನರಳಾಡತೊಡಗಿದ್ದಾರೆ. ಆಗ, ಅದೇ ಮಾರ್ಗವಾಗಿ ಹೋಗುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಮ್ಮ ಪೊಲೀಸ್ ಬುದ್ಧಿ ಪ್ರದರ್ಶಿಸಿರುವ ಅಥಣಿ ಪೊಲೀಸರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ತಾಯಿ ಮತ್ತು ಮಗನ ವಿರುದ್ಧವೇ ಕೇಸ್ ದಾಖಲಿಸಿಕೊಂಡಿದ್ದಾರೆ.

ಇತ್ತ ಗಾಯಾಳುಗಳಾಗಿದ್ದ ಮಹಿಳೆ ವತ್ಸಲಾ ಶಂಕರ ಮುಗ್ದುಮ ಅವರ ಎಡಗಾಲಿಗೆ ತೊಡೆ, ಮೊಣಕಾಲು ಕೆಳಗೆ ಹಾಗು ಹಿಂಬಡಿಗೆ ಮೂರು ಕಡೆ ಎಲುವು ಮುರಿದು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಬೈಕ್ ಓಡಿಸುತ್ತಿದ್ದ ಮಗ ಗುರುಲಿಂಗ ಮುಗ್ದುಮ್ ಮುಖ, ಬಾಯಿ ಒಳಗಡೆ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ಅವರ ಸಂಬಂಧಿ ಈಶ್ವರ ಮಾಹಿತಿಯಂತೆ ಸುಮಾರು 30ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿದೆ.

ಈ ಘಟನೆ ಸೋಮವಾರ ನಡೆದಿದ್ದರೂ, ಗಾಯಾಳುಗಳಿಂದ ದೂರು ಸ್ವೀಕರಿಸಲು ಅಥಣಿ ಪೊಲೀಸರು ಹಿಂದೇಟು ಹಾಕಿದ್ದಾರೆ. ಅವರ ಸಂಬಂಧಿಕರು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರೂ ನಂತರ ಬನ್ನಿ ಎಂದು ಸಾಗ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.  ಬುಧವಾರ ಈ ಸುದ್ದಿ ಮಾಧ್ಯಮದವರಿಗೆ ಗೊತ್ತಾದ ವಿಷಯ ತಿಳಿದು ಆಸ್ಪತ್ರೆಗೆ ಬಂದ ಪೊಲೀಸರು ಗಾಯಾಳುಗಳಿಗೆ ಸಾಂತ್ವನ ಹೇಳಿ ಬಂದಿದ್ದಾರೆ.

ರಸ್ತೆ ಅಪಘಾತದಲ್ಲಿ ಯಾರದೇ ತಪ್ಪಿರಲಿ. ಕೇಸು ಮತ್ತು ಪ್ರತಿಕೇಸು ದಾಖಲಿಸಿಕೊಳ್ಳುವ ಪೊಲೀಸರು ಈ ಘಟನೆಯಲ್ಲಿ ಮಾತ್ರ ಬೈಕ್ ನಲ್ಲಿ ಸಂಚಿರಿಸುತ್ತಿದ್ದ ತಾಯಿ ಮತ್ತು ಮಗನ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿ ಬೈಕಿಗೆ ಹಿಂದಿನಿಂದ ಕಾರು ಹಾಯಿಸಿದ ಕಾರು ಚಾಲಕನ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಿರುವುದು ಅಥಣಿಯಲ್ಲಿ ಪೊಲೀಸ್ ರಾಜ್ ನಡೆಯುತ್ತಿದೆಯ ಎಂದು ಸಂಶಯ ಮೂಡಿಸಿದೆ.

ಈ ಘಟನೆಯ ಬಗ್ಗೆ ಅಥಣಿ ಸಿಪಿಐ, ಡಿವೈಎಸ್ಪಿ ಅವರಿಗೆ ಮಾಹಿತಿ ಇದ್ದರೂ ಈವರೆಗೂ ಗಾಯಾಳುಗಳ ಕಡೆಯಿಂದ ಯಾವುದೇ ದೂರು ದಾಖಲಿಸಿಕೊಳ್ಳದಿರುವುದು ಪೊಲೀಸರು ತಮ್ಮ ಸಿಬ್ಬಂದಿಯ ತಪ್ಪನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದೇ ಅಥಣಿಯ ಜನ ಆರೋಪಿಸುತ್ತಿದ್ದಾರೆ.

ಈಗಲಾದರೂ ಪೊಲೀಸರು ಹಿರಿಯ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ.

Leave a Reply

ಹೊಸ ಪೋಸ್ಟ್‌