ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ 40 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಾಂಛನ ಬಿಡುಗಡೆ ಮಾಡಿ ಕ್ಲಬ್ ಹೌಸ್ ಉದ್ಘಾಟಿಸಿದರು.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟನೆ ಬಳಿಕ ನನ್ನ ಕನಸಿನ ಕರ್ನಾಟ ವಿಷಯ ಕುರಿತು ಸಿಎಂ ಮಾತನಾಡಿದರು.
ಕೈಗಾರಿಕೆಗಳ ಮೂಲಕ ಹೆಚ್ಚಿನ ಉದ್ಯೋಗ ಸೃಜನೆಗೆ ಅವಕಾಶವಿರುವುದರಿಂದ ರಾಜ್ಯದಲ್ಲಿ ಹೂಡಿಕೆ ಮಾಡುವ ಕೈಗಾರಿಕೋದ್ಯಮಗಳಿಗೆ ಉದ್ಯೋಗ ಸೃಜನೆ ಆಧಾರದಲ್ಲಿ ಪ್ರೋತ್ಸಾಹಕ ನೀಡುವ ಕುರಿತು ನೀತಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕೈಗಾರಿಕೆ, ಉದ್ಯಮಗಳಿಗೆ ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಿಮೆಗಳು ಸ್ಥಾಪನೆಯಾಗಿ ತಂತ್ರಜ್ಞಾನ, ಕುಶಲ ಮಾನವ ಸಂಪನ್ಮೂಲ ಹೊಂದಿದ ರಾಜ್ಯವಾಗಿದೆ. ಸಂಪದ್ಭರಿತ, ಸುರಕ್ಷಿತ ಕರ್ನಾಟಕ ನಿರ್ಮಾಣ ನನ್ನ ಕನಸು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಂಶೋಧನೆ ಮತ್ತು ಅಭಿವೃದ್ಧಿ ವಲಯದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಇದಕ್ಕಾಗಿ ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಪ್ರೊ. ಅಶೋಕ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗುವುದು ಎಂದು ತಿಳಿಸಿದ ಸಿಎಂ, ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಉದ್ಯೋಗ ಸೃಜನೆಗೆ ವಿಫುಲ ಅವಕಾಶವಿದೆ. ದೇವಸ್ಥಾನಗಳು, ಪಾರಂಪರಿಕ ತಾಣಗಳು, ಕರಾವಳಿ ಪ್ರದೇಶ ಮೊದಲಾದ ವಲಯಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಬಂದರುಗಳು ಹಾಗೂ ಒಳನಾಡು ಜಲಸಾರಿಗೆ ಅಭಿವೃದ್ಧಿಯನ್ನು ಸಹ ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಆರ್ಥಿಕ ಚಟುವಟಿಕೆಗಳ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ ಅವರು, ರಾಜ್ಯದಲ್ಲಿರುವ 10 ಕೃಷಿ-ಹವಾಮಾನ ವಲಯಗಳಲ್ಲಿ ವೈಜ್ಞಾನಿಕವಾಗಿ ಬೆಳೆಗಳನ್ನು ಬೆಳೆದು ಅವುಗಳ ಸಂಸ್ಕರಣೆ, ಮೌಲ್ಯ ವರ್ಧನೆಯ ಮೂಲಕ ರೈತರ ಆದಾಯ ಹೆಚ್ಚಿಸಲು ಒತ್ತು ನೀಡಲಾಗುವುದು. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ರೈತ ವಿದ್ಯಾ ನಿಧಿ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಲಭ್ಯವಿರುವ ಜಲ ಸಂಪನ್ಮೂಲದ ಸದ್ಬಳಕೆಯ ಮೂಲಕ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಆರೋಗ್ಯ ಸೇವೆಗಳ ಸುಧಾರಣೆಗೆ ವಿಶೇಷವಾಗಿ ತಾಲೂಕು ಆಸ್ಪತ್ರೆಗಳ ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ರಾಜ್ಯದ ಸರಾಸರಿ ತಲಾ ಆದಾಯದಲ್ಲಿ ಕೇವಲ ಶೇ. 30 ಜನರ ಕೊಡುಗೆಯೇ ಗಣನೀಯವಾದುದು. ಉಳಿದ ಜನರೂ ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಅವರ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಯಾಗಬೇಕು ಎಂಬ ಆಶಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಜಿ. ಜಗದೀಶ, ಅಕಾಡೆಮಿಯ ಸದಸ್ಯರು, ಕಾರ್ಯದರ್ಶಿ ಸಿ. ರೂಪಾ ಮತ್ತಿತರರು ಉಪಸ್ಥಿತರಿದ್ದರು.