ವಿಜಯಪುರ: ಮಾಜಿ ಸಿಎಂ ಎಸ್. ಸಿದ್ದರಾಮಯ್ಯ ಇತ್ತಿಚೆಗೆ ಆರ್ ಎಸ್ ಎಸ್ ನ್ನು ತಾಲಿಬಾನ್ ಗೆ ಹೋಲಿಕೆ ಮಾಡಿ ಮಾತನಾಡಿರುವುದನ್ನು ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಖಂಡಿಸಿದ್ದಾರೆ.
ವಿಜಯಪುದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಸಂಘಟನೆಯ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಮುಖಂಡರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೊಂದು ದೇಶಭಕ್ತ ಸಂಘಟನೆ ಎಂದು ಹೊಗಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ಕುರಿತು ಮಾತನಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು
ಇದೇ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಪಾಪದ ಮಂತ್ರಿ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ನೀಡಿರುವ ಹೇಳಿಕೆಗೆ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಜಾರಿಯಾಗಿರುವ ನೀರಾವರಿ ಯೋಜನೆಗಳಿಗೆ ಹಿಂದಿನ ಬಿಜೆಪಿ ಸರಕಾರವೇ ಕಾರಣವಾಗಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳಫ ಈ ಹಿಂದೆಯೇ ಕೆರೆಗೆ ನೀರು ತುಂಬುವ ಯೋಜನೆಯ ಕುರಿತು ಸಾಕಷ್ಟು ಕಾಳಜಿ ವಹಿಸಿ ಅನುಷ್ಠಾನಕ್ಕೆ ತರಲು ಯತ್ನಿಸಿದ್ದಾರೆ. ಇದರ ಪರಿಣಾಮವಾಗಿ ಇಂದು ನೀರಾವರಿಯಾಗಿದೆ. ಅಲ್ಲದೇ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಕೆರೆಗೆ ನೀರು ತುಂಬುವ ಯೋಜನೆಯನ್ನು ಅವೈಜ್ಞಾನಿಕ ಯೋಜನೆ ಎಂದು ತಿರಸ್ಕರಿಸಿತ್ತು. ಅದನ್ನು ಮಾಜಿ ಸಚಿವ ಎಂ. ಬಿ. ಪಾಟೀಲ ಮರೆಯಬಾರದು ಎಂದು ಹೇಳಿದರು.
ಅ. 5 ರಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದಕ್ಷಿಣ ಕನ್ನಡ ಬಿಜೆಪಿ ಸಂಸದ ನಳೀನ ಕುಮಾರ ಕಟೀಲ ಅವರು ವಿಜಯಪುರ ನಗರಕ್ಕೆ ಆಗಮಿಸುತ್ತಿದ್ದಾರೆ. ಅಂದು ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಣಿ ನಡೆಯಲಿದೆ. ಈ ಕಾರ್ಯಕಾರಿಣಿಯಲ್ಲಿ ನಳೀನ ಕುಮಾರ ಕಟೀಲ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸಿಂದಗಿ ಬೈ ಎಲೆಕ್ಷನ್ ಗೆ ಬಿಜೆಪಿ ಅಭ್ಯರ್ಥಿಯನ್ನು ಆದಷ್ಟು ಬೇಗನೇ ಘೋಷಣೆ ಮಾಡಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಆರ್. ಎಸ್. ಪಾಟೀಲ ಕೂಚಬಾಳ, ಅ. 5 ರಂದು ಜಿಲ್ಲೆಯ ನಾನಾ ಪಕ್ಷಗಳ ಹಲವಾರು ಜನ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಸಿಂದಗಿ ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ, ವಿಜಯಪುರ ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.