ಬೆಂಗಳೂರು: ರಾಜ್ಯದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗಾಂಧಿ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧಿ ಸ್ಮಾರಕ ನಿಧಿ ಮತ್ತು ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗಾಂಧೀ ಜಯಂತಿ ಆಚರಣೆ ಹಾಗೂ ಗಾಂಧಿ ಸೇವಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ. ಅವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲ; ನೈತಿಕ ಭಾರತವನ್ನು ಕಟ್ಟುವ ಶಕ್ತಿ ಎಂದು ಅವರು ತಿಳಿಸಿದರು.
ನಾವು ಇಂದು ದೇಶಕ್ಕಾಗಿ ದುಡಿಯುವ ಮೂಲಕ ವಿಶ್ವದಲ್ಲಿ ಅಗ್ರ ಸ್ಥಾನ ಪಡೆಯಲು ಶ್ರಮಿಸಬೇಕು. ಇಂದಿನ ಸಮಾಜದಲ್ಲಿ ನಾವು ನಾಗರಿಕ ಜವಾಬ್ದಾರಿಯ ಕೊರತೆಯನ್ನು ಕಾಣುತ್ತೇವೆ. ಕರ್ತವ್ಯ ಪ್ರಜ್ಞೆ ಮೂಡಿಸಿಕೊಂಡು ಕೆಲಸ ಮಾಡಿದರೆ ಯಾವ ಸವಾಲೂ ದೊಡ್ಡದಲ್ಲ. ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿದರೆ, ಅದುವೇ ಗಾಂಧೀಜಿಯವರಿಗೆ ನಾವು ನೀಡುವ ಗೌರವ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್. ಕೆ. ಪಾಟೀಲ, ನ್ಯಾ. ಅಶೋಕ ಬಿ. ಹಿಂಚಗೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ಹಾಲಪ್ಪ ಆಚಾರ, ಸಂಸದರಾದ ಶಿವಕುಮಾರ ಉದಾಸಿ, ಡಾ. ಎಲ್. ಹನುಮಂತಯ್ಯ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ. ಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಆಯುಕ್ತ ಜಿ. ಜಗದೀಶ ಮುಂತಾದವರು ಉಪಸ್ಥಿತರಿದ್ದರು.
ಸಿದ್ದಗಂಗಾ ಮಠದ ಪರವಾಗಿ ಡಾ. ಶಿವಪ್ಪ ಹಾಗೂ ಮೀರಾತಾಯಿ ಕೊಪ್ಪಿಕರ್ ಪರವಾಗಿ ಮುಧೋಳ ಶಾಸಕರೂ ಆದ ಸಚಿವ ಗೋವಿಂದ ಕಾರಜೋಳ ಅವರು ಪ್ರಶಸ್ತಿ ಸ್ವೀಕರಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 153ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನ ಸೌಧ ಆವರಣದಲ್ಲಿರುವ ಅವರ ಪ್ರತಿಮೆಯ ಬಳಿ ಗಾಂಧೀಜಿಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಅಲ್ಲದೇ, ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ 117 ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು.
ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಗಾಂಧಿ ಜಯಂತಿ ಅಂಗವಾಗಿ ಬೆಂಗಳೂರಿನ ಖಾದಿ ಎಂಪೋರಿಯಂ ನಲ್ಲಿ ಖಾದಿ ಉತ್ಪನ್ನಗಳನ್ನು ವೀಕ್ಷಿಸಿದರು.