ವಿಜಯಪುರ: ಮಹಾತ್ಮಾ ಗಾಂಧಿ ಅವರ ಕನಸುಗಳಿಗೆ ನೀರೆಯುವ ಮೂಲಕ ಬಸವ ನಾಡಿನ ಗಾನಯೋಗಿ ಸಂಘದ ಯುವಕರ ತಂಡ ವಿನೂತನವಾಗಿ ಸಮಾಜ ಸೇವೆ ಮಾಡುವ ಮೂಲಕ ಗಮನ ಸೆಳೆಯುತ್ತಿದೆ. ಇದು ಯಾರೂ ಊಹಿಸದ ಮತ್ತು ಮಾಡದ ಕೆಲಸ. ಈ ಯವಕರು ಮಾಡಿದ ಕೆಲಸಕ್ಕೆ ಎಂಥವರೂ ಭೇಷ ಎನ್ನದೇ ಇರಲಾರರು.
ಬಸವ ನಾಡಿನ ಈ ಯುವಕರು ಈ ಹಿಂದೆ ಪುರಾತನ ಭಾವಿಗೊಂದು ರೂಪ ನೀಡಿ ಭಲೇ ಹುಡುಗರು ಎನಿಸಿಕೊಂಡಿದ್ದರು. ಈಗ ಮಾಡಿರುವ ಕಾರ್ಯ ಆ ಭಾಗದಲ್ಲಿ ತಿರುಗಾಡುವವರೇ ಅಸಹ್ಯ ಪಟ್ಟುಕೊಳ್ಳುವಂತಿತ್ತು. ಆದರೆ, ನಿಷ್ಕಲ್ಮಷ ಮನಸ್ಸಿನ ಈ ಯುವಕರು ಕಲ್ಮಷವನ್ನು ಹೋಗಲಾಡಿಸಿ ಅಂದವಾದ ಗೋಡೆಯ ಮೇಲೆ ಚಂದವಾದ ಚಿತ್ತಾರ ಮೂಡಿಸಿ ಗಮನ ಸೆಳೆದಿದ್ದಾರೆ.
ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಎಲ್ ಬಿ ಎಸ್ ಮಾರ್ಕೇಟ್ ಎಂದೇ ಹೆಸರಾಗಿದೆ. ಈ ಮಾರುಕಟ್ಟೆಯ ಮೊದಲ ಅಂತಸ್ತಿಗೆ ಹೋಗಲು ನಿರ್ಮಿಸಿರುವ ಮೆಟ್ಟಿಲುಗಳು ಮತ್ತು ಅವುಗಳ ಗೋಡೆಗಳನ್ನು ನೋಡಿದರೆ ಸುಸಂಸ್ಕೃತರಿಗೆ ವಾಕರಿಕೆ ಬರುತ್ತದೆ. ಎಲ್ಲೆಂಟದರಲ್ಲಿ ಗುಟಕಾ ತಿಂದು ಉಗುಳಿರುವ ಕಲೆಗಳು ಹೇಸಿಗೆ ಮೂಡಿಸಿದ್ದವು.
ಮೊದಲ ಅಂತಸ್ತಿಗೆ ಹೋಗುವ ಸಾರ್ವಜನಿಕರು ಕಸ, ಕಡ್ಡಿ ಹಾಗೂ ಗುಟಕಾ,ಮಾವಾ, ತಿಂದು ಉಗುಳಿ ಕಲುಷಿತಗೊಳಿಸಿದ್ದರು. ಇದನ್ನು ನೋಡಿದ ವಿಜಯಪುರ ನಗರಷ ಗಾನಯೋಗಿ ಸಂಘದ ಯುವಕರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಹೇಸಿಗೆ ಬರುತ್ತಿದ್ದ ಗೋಡೆಯನ್ನು ಸ್ವಚ್ಛಗೊಳಿಸಿ ಅಕ್ಷರಗಳ ಸುವಾಸನೆ ಬರುವಂತೆ ಮಾಡಿದ್ದಾರೆ. ಗೋಡೆಯ ಮೇಲೆ ಕನ್ನಡ ಸ್ವರ ಹಾಗೂ ವ್ಯಂಜನಗಳನ್ನು ಬರೆದು ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ., ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ತಮ್ಮ ಸಂಘವು ಪ್ರಯೋಗಾತ್ಮಕವಾಗಿ ಈ ರೀತಿ ವಿಶೇಷ ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಿದೆ. ವಿಜಯಪುರ ಜಿಲ್ಲೆಯು ಐತಿಹಾಸಿಕ ಸ್ಮಾರಕಗಳ ನಾಡಾಗಿದ್ದು ಬೇರೆ ಬೇರೆ ಭಾಗಗಳಿಂದ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಾವು ಹಾಗೂ ತಮ್ಮ ಸಂಘದ ಯುವಕರು ಸೇರಿಕೊಂಡು ಸುಂದರ ಹಾಗೂ ಸ್ವಚ್ಛ ಪರಿಸವನ್ನು ಮಾಡಿದ್ದೇವೆ. ಜನರೂ ಕೂಡ ತಮ್ಮ ಜೊತೆ ಕೈ ಜೋಡಿಸಿ ನಗರದ ಸ್ವಚ್ಛತೆಗೆ ಕೈ ಜೋಡಿಸಬೇಕು ಎಂದು ಹೇಳಿದ್ದಾರೆ.
ಈ ಕೆಲಸದಲ್ಲಿ ಸಂತೋಷ ಚವ್ಹಾಣ, ಸಚಿನ ವಾಲೀಕಾರ, ವಿಕಾಸ ಕಂಬಾಗಿ, ರವಿ ರತ್ನಾಕರ, ವಿಠ್ಠಲ ಗುರುವಿನ, ಕಿರಣ ಶಿವಣ್ಣನವರ, ಸಚೀನ ಚವ್ಹಾಣ, ವಿರೇಶ ಸೊನ್ನಲಗಿ, ಮಹೇಶ ಕುಂಬಾರ, ಮಲ್ಲಿಕಾರ್ಜುನ ಶಿಂಧೆ, ರಾಜಕುಮಾರ ಹೊಸಟ್ಟಿ. ಸೇರಿದಂತೆ ಮುಂತಾದವರು ಈ ಕನ್ನಡ ಉಳಿಸಿ ಬೆಳೆಸುವ ಹಾಗೂ ಸುತ್ತಲೂ ಸ್ವಚ್ಛವಾದ ಪರಿಸರ ನಿರ್ಮಾಣಮಾಡುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಗಾಂಧಿ ಜಯಂತಿ ಆಚರಣೆ ಇನ್ನೂ ಸುಮಾರು ಒಂದು ವಾರ ಇರುವಾಗಲೇ ಗಲೀಜಾದ ಗೋಡೆಗೊಂದು ಅಂದವಾದ ಬಣ್ಣ ಹಚ್ಚಿ ಅ, ಆ, ಇ, ಈ ಕನ್ನಡಾಕ್ಷರಗಳನ್ನು ಬರೆಯುವ ಮೂಲಕ ರಾಷ್ಟ್ರಪಿತನಿಗೆ ಈ ಯುವಕರು ಗೌರವ ಸಲ್ಲಿಸಿರುವುದು ಗಮನಾರ್ಹವಾಗಿದೆ.