ಬಾಗಲಕೋಟೆ: ಯುಕೆಪಿ-3ನೇ ಹಂತದ ಯೋಜನೆ ಸಂಪೂರ್ಣ ಜಾರಿಗಾಗಿ ಯಾವುದೇ ಹೋರಾಟಕ್ಕೂ ನಾನು ಸಿದ್ಧ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಬಿ. ಪಾಟೀಲ ತಿಳಿಸಿದ್ದಾರೆ.
ಯುಕೆಪಿ-3ನೇ ಹಂತದ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಅನಗವಾಡಿ ಸೇತುವೆಯಿಂದ ಟಕ್ಕಳಕಿ ಕೃಷ್ಣಾ ನದಿಯವರೆಗೆ ಆಯೋಜಿಸಲಾಗಿದ್ದ ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
1964 ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಂದ ಆರಂಭವಾದ ಯುಕೆಪಿ ಯೋಜನೆಗಳು ನಾನಾ ಕಾರಣಗಳಿಂದಾಗಿ ಇದುವರೆಗೂ ಪೂರ್ಣವಾಗಿಲ್ಲ. ನಮ್ಮ ಭಾಗದವರೆ 6 ಬಾರಿ ನೀರಾವರಿ ಸಚಿವರಾಗಿದ್ದರೂ ಈ ಯೋಜನೆ ಪೂರ್ಣಗೊಳಿಸಲಿಲ್ಲ ಎಂಬ ಆರೋಪ ಇದೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿ ಮಾಡಿದ ಕಾರ್ಯ ಯುಕೆಪಿ ಇತಿಹಾಸದಲ್ಲಿಯೇ ಅವಿಸ್ಮರಣೀಯವಾಗಿದೆ. ಬಾಗಲಕೋಟ-ವಿಜಯಪುರ ಜಿಲ್ಲೆಗೆ ಹೊಲಿಸಿದರೆ ಬಾಗಲಕೋಟೆಗಿಂತಲೂ ವಿಜಯಪುರ ಜಿಲ್ಲೆ ಹೆಚ್ಚು ಒಣ ಭೂಮಿಯನ್ನು ಹೊಂದಿದ ಜಿಲ್ಲೆಯಾಗಿದ್ದು, ಇಲ್ಲಿಯ ರೈತರ ಸ್ಥಿತಿ ತೀವ್ರ ಶೋಚನೀಯವಾಗಿತ್ತು. ಇಲ್ಲಿ ನಮಗೆ ಕನ್ಯೆ ಕೊಡಲು ಸಹ ಯಾರೂ ಮುಂದೆ ಬರುತ್ತಿರಲ್ಲಿಲ್ಲ. ಅಂಥ ಪರಿಸ್ಥಿತಿಯಲ್ಲಿದ್ದ ವಿಜಯಪುರದ ಸ್ಥಿತಿ ಇಂದು ಸುಧಾರಣೆಯಾಗಿದೆ. ಹೆಚ್ಚು ನೀರಾವರಿ ಯೋಜನೆಗಳು ಜಾರಿಯಾಗಿವೆ. ನಮ್ಮ ಜಿಲ್ಲೆಯಿಂದ ಗಡಿಭಾಗದ ಮಹಾರಾಷ್ಟ್ರದ ಕನ್ನಡಿಗರು ವಾಸಿಸುವ ಹಳ್ಳಿಗಳಿಗೂ ನೀರು ಹರಿದು ಅಲ್ಲಿಯೂ ಅಂತರ್ಜಲ ಹೆಚ್ಚಿದೆ ಎಂದು ಅವರು ತಿಳಿಸಿದರು.
ಅತೀ ಹೆಚ್ಚು ಪ್ರದೇಶ ಮುಳುಗಡೆಯಾಗುವ ಬಾಗಲಕೋಟ ಜಿಲ್ಲೆಯ ರೈತರು ಹೆಚ್ಚು ಸಂತ್ರಸ್ತರಾಗಿದ್ದು, ಎಲ್ಲಾ ರೈತರಿಗೂ ಏಕರೂಪ ಪರಿಹಾರವನ್ನು ನೀಡಲು ಸರಕಾರ ಕೂಡಲೇ ಮುಂದಾಗಬೇಕು. ಆಣೆಕಟ್ಟು ಎತ್ತರಿಸುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕಾಗಿ ಎಂಥ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.