ಬಳ್ಳಾರಿ: ಮುಂಬರುವ ಸಿಂದಗಿ ಮತ್ತು ಹಾನಗಲ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಸಿದಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಕೋರ್ ಕಮಿಟಿ ಸಭೆಯಲ್ಲಿ ಈ ಕ್ಷೇತ್ರದಿಂದ ತರಿಸಿಕೊಂಡ ವರದಿಯ ಕುರಿತು ಚರ್ಚಿಸಿ, ಪಕ್ಷದ ಸಂಸದೀಯ ಮಂಡಳಿಗೆ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗುವುದು. ಶೀಘ್ರವೇ ಅಭ್ಯರ್ಥಿಯ ಹೆಸರು ಪ್ರಕಟವಾಗಲಿದೆ. ಪಕ್ಷವು ಬೂತ್ ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರ ವರೆಗೆ ಎಲ್ಲರೂ ಒಂದಾಗಿ ಕಾರ್ಯ ನಿರ್ವಹಿಸಿ ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ತಿಳಿಸಿದರು.
ಮೇಕೆದಾಟು: ಮೇಕೆದಾಟು ಯೋಜನೆಯ ವಿಚಾರದಲ್ಲಿ ತಮಿಳುನಾಡು ರಾಜಕಾರಣ ಬೆರೆಸುತ್ತಿದ್ದು, ಈ ಯೋಜನೆ ತಮಿಳುನಾಡಿನ ಕೈಯಲ್ಲಿ ಇಲ್ಲ. ತಮಿಳುನಾಡು ಸರಕಾರವು ನಿರ್ಣಯ ಕೈಗೊಂಡು, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನಮ್ಮ ನಿಲುವಿನಲ್ಲಿ, ಪ್ರಯತ್ನದಲ್ಲಿ ಹಾಗೂ ಕಾನೂನು ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೇಕೆದಾಟು ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ತುಂಗಭದ್ರಾ ಸಮತೋಲನ ಜಲಾಶಯ: ತುಂಗಭದ್ರಾ ಅಣೆಕಟ್ಟೆಯಲ್ಲಿ ಹೂಳು ತೆಗೆಯಲು ಯಾವುದೇ ಕಂಪೆನಿ ಮುಂದೆ ಬಾರದ ಹಿನ್ನೆಲೆಯಲ್ಲಿ ಸಮಾನಾಂತರವಾಗಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರ ನಿರ್ಧರಿಸಿತ್ತು. ಅದರಂತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯ ಡಿ ಪಿ ಆರ್ ಸಿದ್ಧಗೊಳಿಸಲು ರೂ. 20 ಕೋ. ಬಿಡುಗಡೆ ಮಾಡಿದ್ದಾರೆ. ಡಿ ಪಿ ಆರ್ ಸಿದ್ಧವಾದ ನಂತರ ಸಂಬಂಧ ಪಟ್ಟ ರಾಜ್ಯಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ಅವರು ತಿಳಿಸಿದರು.