ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಮತಕ್ಷೇತ್ರದ ಬೈ ಎಲೆಕ್ಷನ್ ಗೆ ಸಂಬಂಧಿಸಿದಂತೆ ಚುನಾವಣೆಗೆ ಮಾಡಬಹುದಾದ ನಾನಾ ವೆಚ್ಚಗಳ ಕರಡು ದರಪಟ್ಟಿ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆದೇಶ ಹೊರಡಿಸಿದ್ದಾರೆ.
ಈ ದರಪಟ್ಟಿ ಕುರಿತು ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಅಂಗವಾಗಿ ಅಭ್ಯರ್ಥಿಗಳು ಬಳಸುವ ನಾನಾ ವಾಹನಗಳು, ಪ್ರಚಾರ ಸಾಮಗ್ರಿ ಹಾಗೂ ಇತರ ವೆಚ್ಚಗಳಿಗೆ ಸಂಬಂಧಿಸಿದಂತೆ ಕರಡು ದರಪಟ್ಟಿ ಹೊರಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿಸಲಾಗಿದೆ. ಮಂಗಳವಾರ ಸಂಜೆಯೊಳಗಾಗಿ ಯಾವುದೇ ರೀತಿಯ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದಾಗಿದೆ. ನಂತರ ಪುನರ್ ಪರಿಶೀಲಿಸಿ ಅಂತಿಮ ದರ ಪಟ್ಟಿ ಹೊರಡಿಸಲಾಗುವು ಎಂದು ತಿಳಿಸಿದರು.
ಚುನಾವಣೆಗೆ ಸ್ಫರ್ಧಿಸಿದ ಅಭ್ಯರ್ಥಿಗಳು ಅಂತಿಮಗೊಂಡ ತಕ್ಷಣ ಪ್ರಚಾರಕ್ಕೆ ಸಂಬಂಧಪಟ್ಟಂತೆ ಕರಪತ್ರ ಮುದ್ರಿಸಬೇಕಾದರೆ ಕಡ್ಡಾಯವಾಗಿ ಡಿಕ್ಲೇರೇಶನ್ ಸಲ್ಲಿಸಬೇಕು. ಕರಪತ್ರದ ಕೆಳಭಾಗದಲ್ಲಿ ಮುದ್ರಕರ ಹೆಸರು ಪ್ರತಿಗಳ ಸಂಖ್ಯೆ ಸೇರಿದಂತೆ ನಿಗದಿತ ಮಾಹಿತಿಯನ್ನು ಮುದ್ರಿಸಿರಬೇಕು. ಸ್ಟಾರ್ ಪ್ರಚಾರಕರು, ಅಭ್ಯರ್ಥಿಗಳು ಅಂತಿಮಗೊಳ್ಳುವ ಮುಂಚೆ ಈ ಕ್ಷೇತ್ರಕ್ಕೆ ಆಗಮಿಸಿದ್ದಲ್ಲಿ ಈ ಸ್ಟಾರ್ ಪ್ರಚಾರಕರ ಉದ್ದೇಶ, ಪ್ರಯಾಣದ ವಿವರ ಸೇರಿದಂತೆ ಅವಶ್ಯಕ ಮಾಹಿತಿಯನ್ನು ಅಥವಾ ಅರ್ಜಿಯನ್ನು ಲಿಖಿತ ರೂಪದಲ್ಲಿ ನೀಡಬೇಕು. ಇದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಿಂದಗಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಬೇಕು. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ನಿಗಾ ವಹಿಸಲು ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೋಡಲ್ ಅಧಿಕಾರಿಯಾಗಿಜದ್ದು, ಅವರಿಗೂ ದೂರು ಸಲ್ಲಿಸಬಹುದಾಗಿದೆ. ಅಲ್ಲದೇ, 18 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ಸಹ ನೇಮಿಸಲಾಗಿದೆ. ಅವರ ವಾಹನ ಹಾಗೂ ಸೆಕ್ಟರ್ ಅಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಸಹ ಅಳವಡಿಸಲಾಗಿದೆ. ಅದೇ ರೀತಿ ಎಸ್‌ಎಸ್‌ಟಿ ತಂಡಗಳು ಮತ್ತು ವಿಎಸ್‌ಟಿ ತಂಡಗಳು ಸಹ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಸಭೆಗೂ ಮುಂಚೆ ಸಿಂದಗಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಹಾಗೂ ವಿವಿಪ್ಯಾಟ್‌ಗಳ ಪ್ರಥಮ ರ‍್ಯಾಂಡಮೈಜೇಶನ್ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 297 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಥಮ ರ‍್ಯಾಂಡಮೈಜೇಶನ್ ಈಗ ಮಾಡಲಾಗಿದ್ದು, ಎರಡನೇ ರ‍್ಯಾಂಡಮೈಜೇಶನ್ ಸಿಂದಗಿ ಚುನಾವಣಾಧಿಕಾರಿಗಳ ಸಮಕ್ಷಮ ನಡೆಸಲಾಗುತ್ತದೆ. ಅದರಂತೆ ಸಿಂದಗಿ ವಿಧಾನಸಭೆ ಕ್ಷೇತ್ರದ ಚುನಾವಣೆಗಾಗಿ 665 ಬ್ಯಾಲೆಟ್ ಯೂನಿಟ್ ಮತ್ತು 657 ಕಂಟ್ರೋಲ್ ಯೂನಿಟ್ ಹಾಗೂ 656 ವಿವಿಪ್ಯಾಟ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಈ ಕುರಿತು ಚುನಾವಣೆ ಆಯೋಗದಿಂದ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ. ಚುನಾವಣೆ ಯಶಸ್ವಿಯಾಗಿ ನಡೆಯಲು ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಶೇ. 40 ರಷ್ಟು ಬ್ಯಾಲೆಟ್ ಯೂನಿಟ್ ಹಾಗೂ ಶೇ. 40 ರಷ್ಟು ಕಂಟ್ರೋಲ್ ಯೂನಿಟ್ ಸೇರಿಸಲಾಗುತ್ತಿದೆ. ಹೆಚ್ಚುವರಿಯಾಗಿ ತರಬೇತಿ ಉದ್ದೇಶದಿಂದ ಶೇ. 50 ರಷ್ಟು ವಿವಿ ಪ್ಯಾಟ್ ಸಹ ಮೀಸಲಿಡಲಾಗಿದೆ.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಚುನಾವಣೆ ಶಾಖೆ ತಹಸೀಲ್ದಾರ ಶಾಂತಲಾ, ಹಾದಿಮನಿ, ಸಂಜಯ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಮತ್ತು ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.