ವಿಜಯಪುರ: ಈ ಹಿಂದೆ ಅಸ್ಪೃಶ್ಯತೆ ಆಚರಣೆ ಜಾರಿಯಲ್ಲಿದ್ದ ಕಾಲದಲ್ಲಿಯೇ ಕೇರಿಯ ದಲಿತರನ್ನು ಊರ ಗೌಡರ ಮನೆಯಲ್ಲಿ ಸ್ಥಾನ ಕೊಟ್ಟ ಕುಟುಂಬ ತೊರವಿ ಗೌಡರ ಕುಟುಂಬ ಎಂದು ಡಿ ಎಸ್ ಎಸ್ ಮುಖಂಡ ಅಡಿವೆಪ್ಪ ಸಾಲಗಲ ಮಾಜಿ ಸಚಿವ ದಿ. ಬಿ. ಎಂ. ಪಾಟೀಲ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರ ಕುಟುಂಬದ ಗುಣಗಾನ ಮಾಡಿದ್ದಾರೆ.
ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಸಿದ್ದೇಶ್ವರ ಪಿಯು ಕಾಲೇಜಿನಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಡಿವೆಪ್ಪ ಸಾಲಗಲ ಅವರಿಗೆ ಚಿಂತನ ಬಳಗದಿಂದ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, 40 ವರ್ಷಗಳ ಹಿಂದೆ ಅದೇ ತಾನೆ ಕಾಲೇಜು ಮೆಟ್ಟಿಲು ಹತ್ತಿದ್ದ ನಮಗೆ ನಮ್ಮ ಊರಿನ ಗೌಡರಾದ ಬಿ. ಎಂ. ಪಾಟೀಲ ಅವರು ತೋರಿದ ಪ್ರೀತಿ, ಕರುಣೆ ಅಪಾರ. ಸಾಮಾನ್ಯರು ಯಾರು ಅವರ ಹತ್ತಿರ ಹೋಗಲು ಭಯ ಪಡುತ್ತಿದ್ದ ಸಂದರ್ಭದಲ್ಲಿ ತಮ್ಮ ಗ್ರಾಮದ ಹಿಂದುಳಿದವರ ಬಗ್ಗೆ ಕೇರಿಯಲ್ಲಿ ವಾಸಿಸುವ ಕಡು-ಬಡವರ ಬಗ್ಗೆ ಅಪಾರ ಪ್ರೀತಿಯನ್ನು ಬಿ. ಎಂ. ಪಾಟೀಲ ಅವರು ಹೊಂದಿದ್ದರು. ಆಗ ತಾನೆ ಪದವಿ ಮುಗಿಸಿದ ನಮ್ಮ ಕೇರಿಯ ಇಂದಿನ ಕಾಂಗ್ರೆಸ್ ಅಧ್ಯಕ್ಷ ಪ್ರೊ. ರಾಜು ಆಲಗೂರ ಸೇರಿದಂತೆ 6 ಜನರಿಗೆ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ಉತ್ತಮ ಉದ್ಯೋಗ ನೀಡಿ ನಮ್ಮ ಬದುಕಿಗೆ ಆಸರೆಯಾದರು. ನಾವು ಸಾರ್ವಜನಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ನಮ್ಮನ್ನು ಪ್ರೋತ್ಸಾಹಿಸಿ ಸನ್ಮಾರ್ಗದಲ್ಲಿ ಮುನ್ನೆಡೆಸಿದರು ಎಂದು ಸ್ಮರಿಸಿದರು.
ಬಿ. ಎಂ. ಪಾಟೀಲ ಅವರ ನಂತರ ಎಂ. ಬಿ. ಪಾಟೀಲ ಅವರು ಕೂಡ ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರ ಜ್ಯಾತ್ಯತೀತ ನಿಲುವು ಇಂದಿನ ರಾಜಕಾರಣಿಗಳಿಗೆ ಮಾದರಿ. ನಿವೃತ್ತಿ ನಂತರವೂ ನನ್ನ ಆಯುಷ್ಯ ಇರುವವರೆಗೆ ಬಿ ಎಲ್ ಡಿ ಇ ಸಂಸ್ಥೆ, ಎಂ. ಬಿ. ಪಾಟೀಲ ಅವರ ಸೇವೆಯನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಮಾತನಾಡಿ, ಕ್ರೂರಿಯಾಗಿದ್ದ ಅಂಗುಲಿಮಾಲಾ ಬುದ್ಧನಿಂದ ಆಕರ್ಷಿತನಾಗಿ ಸನ್ಮಾರ್ಗದಲ್ಲಿ ನಡೆದು ಇತಿಹಾಸಗಳ ಪುಟದಲ್ಲಿ ದಾಖಲಾಗಿದ್ದಾನೆ. ಅದೇ ಮಾದರಿಯಲ್ಲಿ ಅಡ್ಡ ದಾರಿಯಲ್ಲಿದ್ದ ಅಡಿವೆಪ್ಪ ಸಾಲಗಲ, ಎಂ. ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಇಲ್ಲದಿದ್ದರೆ 20 ವರ್ಷಗಳ ಹಿಂದೆಯೇ ಆತ ನಮ್ಮಿಂದ ಅಗಲುತ್ತಿದ್ದ ಎಂದು ಹಿಂದಿನ ಘಟನೆಗಳನ್ನು ಸ್ಮರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಉಪಕಾರ ಪಡೆದು, ಹೊಸ್ತಿಲು ದಾಟುತ್ತಲೇ ತಿರುಗಿ ಬೀಳುವ ಇಂದಿನ ಕಾಲಘಟ್ಟದಲ್ಲಿ ಸ್ವಾಮಿ ನಿಷ್ಠೆ ಮಹತ್ವ ಪಡೆದುಕೊಂಡಿದೆ. ಸ್ವಾಮಿ ನಿಷ್ಠೆ ಮತ್ತು ಸಂಘರ್ಷ ಸಾಲಗಲ ಅವರ ಎರಡು ಮುಖಗಳು. ಎಂಥದ್ದೆ ಪ್ರಸಂಗಗಳಲ್ಲಿಯೂ ಅವರು ತಮ್ಮ ಸ್ವಾಮಿ ನಿಷ್ಠೆ ಬಿಡಲಿಲ್ಲ. ಎಷ್ಟು ದೊಡ್ಡವರನ್ನು ಎದುರು ಹಾಕಿಕೊಳ್ಳಲು ಹಿಂಜರಿಯಲಿಲ್ಲ. ಹಿಂದೆ ಮುಂದೆ ನೋಡದೆ ಸದಾ ಸಂಘರ್ಷಕ್ಕೆ ಸಿದ್ಧರಾಗಿರುವ ಅಡಿವೆಪ್ಪ ಸಾಲಗಲ ಅವರು ನಿವೃತ್ತಿಯ ನಂತರ ಬುದ್ಧ, ಬಸವ ಮತ್ತು ಅಂಬೇಡ್ಕರ ಅವರ ಮಾರ್ಗದಲ್ಲಿ ನೂರಾರು ಯುವಕರನ್ನು ಮುನ್ನೆಡೆಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ವಿವಿ ಆಡಳಿತ ಮಂಡಳಿ ಮಾಜಿ ಸದಸ್ಯ ಸುರೇಶ ಘೋಣಸಗಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ವೈ. ಕೊಣ್ಣೂರ, ಜಾಗತೀಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಅಧ್ಯಕ್ಷ ಜಿ. ಬಿ. ಸಾಲಕ್ಕಿ, ಬಿ ಎಲ್ ಡಿ ಇ ಅಧೀಕ್ಷಕ ಎಸ್. ಎ. ಬಿರಾದಾರ, ಡಿ. ಆರ್. ನಿಡೋಣಿ, ಎ. ಬಿ. ಬೂದಿಹಾಳ, ಎನ್. ಕೆ. ಕುಂಬಾರ, ಡಿ. ಕೆ. ತಾವಸೆ, ಅನೀಲ ಸೂರ್ಯವಂಶಿ, ಮಹೇಶ ವಿ. ಶಟಗಾರ, ಅಪ್ಪುಗೌಡ ಪಾಟೀಲ ಬೊಮ್ಮನಹಳ್ಳಿ, ಪ್ರಶಾಂತ ಬಾಗಾದಿ, ಎಂ. ಕೆ. ಬಿರಾದಾರ, ವಿಜಯ ಸಾರವಾಡ ಮುಂತಾದವರು ಉಪಸ್ಥಿತರಿದ್ದರು.