ವಿಜಯಪುರ: ಇದು ನಂಬಲು ಕಷ್ಟವಾದರೂ ಸತ್ಯ. ಇಲ್ಲಿ ರೋಗಿಯ ಇಚ್ಛಾಶಕ್ತಿಯ ಜೊತೆ ಆಸ್ಪತ್ರೆಯ ವೈದ್ಯರ ಅಕ್ಕರೆಯ ಆರೈಕೆ ಬಡವನಿಗೆ ಹೊಸ ಬದುಕು ನೀಡಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ವಿಜಯಪುರ ನಗರದ ವಾರ್ಡ್ ಸಂಖ್ಯೆ 2 ರಲ್ಲಿ ಬರುವ ಅಫಜಲಪುರ ಟಕ್ಕೆ ನಿವಾಸಿ ದೇವೇಂದ್ರ ಕೂಸಪ್ಪ ಚಲವಾಸಿ(50) ಅನಾರೋಗ್ಯದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು. ಮೇ 3 ರಂದು ಕರೆ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದರು.
ಆಗ ಕೂಡಲೇ ವಿಜಯಪುರ ನಗರದ ಡಾ. ಭಾಂಗಿ ಆಸ್ಪತ್ರೆಗೆ ದಾಖಲಾದ ಅವರು ಕೊರೊನಾ ಚಿಕಿತ್ಸೆಗೆ ಒಳಗಾದರು. ಹಲವಾರು ದಿನ ಆಕ್ಸಿಜನ್ ಮೇಲೆ ಚಿಕಿತ್ಸೆ ಪಡೆದ ಅವರು ಇದೀಗ ಗುಣಮುಖರಾಗಿ ಅ. 4 ರಂದು ಐದು ತಿಂಗಳು ಒಂದು ದಿನದ ಬಳಿಕ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ.
ಈ ಕುರಿತು ದೂರವಾಣಿ ಮೂಲಕ *ಬಸವ ನಾಡು* ಗೆ ಪ್ರತಿಕ್ರಿಯೆ ನೀಡಿದ ದೇವೇಂದ್ರ ಕೂಸಪ್ದ ಚಲವಾದಿ, ತನಗೆ ಈಗ ಪುನರ್ಜನ್ಮ ಸಿಕ್ಕಂತಾಗಿದೆ.
ಕೊರೊನಾ ಸೋಂಕಿತನಾಗಿದ್ದ ತಮಗೆ ಡಾ. ಭಾಂಗಿ ಆಸ್ಪತ್ರೆಯ ವೈದ್ಯರ ಕಾಳಜಿ, ಅಲ್ಲಿ ಸಿಬ್ಬಂದಿಯ ಆರೈಕೆ, ಕುಟುಂಬಸ್ಥರ ಪ್ರೀತಿ ಮತ್ತು ಹಿರಿಯರ ಹಾಗೂ ದೇವರ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಡಾ. ಬಾಂಗಿ ಆಸ್ಪತ್ರೆಯ ವೈದ್ಯರಾದ ಡಾ. ರೆಗಾನ್ ಬಾಂಗಿ, ಶಿವಕುಮಾರ, ಪೂಜಾರಿ, ಇನಾಮದಾರ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಚಿರಋಣಿಯಾಗಿದ್ದೇನೆ ಎಂದು ತಿಳಿಸಿದರು.
ವೈದ್ಯರು, ಆರೋಗ್ಯ ಕಾರ್ಯಕರ್ತರು ಚಿಕಿತ್ಸೆಯ ಜೊತೆಗೆ ದೇವೇಂದ್ರ ಕೂಸಪ್ಪ ಚಲವಾದಿ ಅವರ ಪ್ರಬಲ ಇಚ್ಛಾಶಕ್ತಿ ಕೊರೊನಾ ದಿಂದ ಗುಣಮುಖರಾಗಲು ಕಾರಣ ಎನ್ನಬಹುದಾಗಿದೆ. ಕೊರೊನಾ ಸಂದರ್ಭದಲ್ಲಿ ಬಹುತೇಕರು ಗಾಬರಿಯಾಗಿ ಹೆಚ್ಚಿನ ಅಘಾತಕ್ಕೊಳಗಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ದೇವೇಂದ್ರ ಕೂಸಪ್ಒ ಚಲವಾದಿ ಅವರಂಥ ಧೈರ್ಯಶಾಲಿಗಳು ಇತರ ರೋಗಿಗಳಿಗೆ ಧೈರ್ಯ ಬರಲು ಮಾದರಿಯಾಗಿದ್ದಾರೆ.