ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ- ಮಸೂತಿ ಬಳಿ ಕಂಪಿಸಿದ ಭೂಮಿ- ರಿಕ್ಚರ್ ಮಾಪಕದಲ್ಲಿ ತೀವ್ರತೆ ದಾಖಲು

ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪ ದಾಖಲಾಗಿದೆ.  ಕಳೆದ ಎರಡು ವಾರಗಳಿಂದ ಜಿಲ್ಲೆಯ ಅಲ್ಲಲ್ಲಿ ಭೂಮಿ ಒಳಗಿನಿಂದ ಶಬ್ದ ಹೊರ ಬರುತ್ತಿದ್ದು, ಭೂಮಿ ಕಂಪಿಸಿದ ಅನುಭವವೂ ಆಗುತ್ತಿದೆ.

ಈ ಬಾರಿ ಮಟಮಟ ಮಧ್ಯಾಹ್ನ ಭೂಮಿ ಕಂಪಿಸಿದ್ದು, ಇದು ಭೂಕಂಪನ ಎಂದು ಜಿಲ್ಲಾಡಳಿತ ದೃಢಪಡಿಸಿದೆ.  ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಮುಳವಾಡ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.  ಮಧ್ಯಾಹ್ನ 3.09 ನಿಮಿಷಕ್ಕೆ ಜೋರಾದ ಶಬ್ದ ಕೇಳಿ ಬಂದಿದ್ದು, ಭೂಕಂಪನದಿಂದ ಶಾಲೆಯಲ್ಲಿ ನಡೆಯುತ್ತಿದ್ದ ತರಗತಿಗಳಿಂದ ಮಕ್ಕಳು ಹೊರಗೆ ಓಡಿ ಬಂದಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನ  1.47ಕ್ಕೆ ಭೂಮಿ ಕಂಪಿಸಿತ್ತು.  ಅದಕ್ಕಿಂತಲೂ ಈ ಬಾರಿ ದುಪ್ಪಟ್ಟಾಗಿ ಭೂಮಿ ಕಂಪಿಸಿದೆ ಎಂದು ಮಸೂತಿ ಗ್ರಾಮದ ಶ್ರೀ ಸಂಗನ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜಗದೀಶ ಸಾಲಾಡಿ ಕಳೆದ ವಾರ ಈ ಕುರಿತು ಜಿಲ್ಲಾಡಳಿತಕ್ಕೆ ಗಮನ ತಂದಾಗ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಭೇಟಿ ನೀಡಿದ್ದರು.  ಅಲ್ಲದೇ, ಅದು ಲಘು ಭೂಕಂಪನವಾಗಿದೆ.  ಈ ಪ್ರದೇಶ ಭೌಗೋಳಿಕವಾಗಿ ಗಟ್ಟಿ ಪ್ರದೇಶದಲ್ಲಿ ಇರುವುದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ವಿಶ್ವಾಸ ಮೂಡಿಸಿದ್ದರು.  ಕಳೆದ ವರ್ಷವೂ ಮೂರು ಬಾರಿ ಈ ರೀತಿ ಭೂಕಂಪನ ಉಂಟಾಗಿತ್ತು ಎಂದು ತಿಳಿಸಿದ್ದಾರೆ.

ಈಗಿನ ಅನುಭವ ಭಯಾನಕವಾಗಿತ್ತು.  ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಜೋರಾಗಿ ಶಬ್ದ ಕೇಳಿ ಬಂತು.  ಅಲ್ಲದೇ, ಭೂಮಿಯೂ ಕಂಪಿಸಿದ್ದರಿಂದ ಮಕ್ಕಳು ಗಾಬರಿಯಾಗಿ ತರಗತಿಗಳಿಂದ ಹೊರಗಡೆ ಓಡಿ ಬಂದಿದ್ದಾರೆ.  ನಮಗೆಲ್ಲ ಆತಂಕ ಉಂಟಾಗಿದೆ.  ಗ್ರಾಮಸ್ಥರೂ ಕೂಡ ತಮಗೆ ಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.  ಹಗಲು ಹೊತ್ತಿನಲ್ಲಿ ನಾವು ತರಗತಿಯಿಂದ ಹೊರಗಡೆ ಬಂದು ರಕ್ಷಣೆ ಪಡೆದಿದ್ದೇವೆ.  ರಾತ್ರಿ ವೇಳೆ ಈ ರೀತಿಯಾದರೆ ನಮ್ಮನ್ನು ರಕ್ಷಿಸುವವರು ಯಾರು? ಕೂಡಲೇ ಸರಕಾರ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಈ ಕುರಿತು ಪರಿಶೀಲನೆ ನಡೆಸಬೇಕು.  ಅಲ್ಲದೇ, ಇದಕ್ಕೆ ಕಾರಣವನ್ನೂ ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಮಧ್ಯೆ ಮಧ್ಯಾಹ್ನ 3 ಗಂಟೆ 10 ನಿಮಿಷಕ್ಕೆ ಮಸೂತಿ ಗ್ರಾಮದ ಪಶ್ಚಿಮಕ್ಕೆ 2 ಕಿ. ಮೀ. ಅಂತರದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದ್ದು, ರಿಕ್ಚರ್ ಮಾಪಕದಲ್ಲಿ 2.9 ತೀವ್ರತೆಯ ಕಂಪನ ದಾಖಲಾಗಿದೆ.  ಇದು ಲಘು ಭೂಕಂಪವಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಭೂಕಂಪನವನ್ನು ದೃಢಪಡಿಸಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ ಎಂದು ವಿಜಯಪುರ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ಕಳೆದ ಸ. 4 ರಂದು 3.9 ತೀವ್ರತೆಯ ಭೂಕಂಪನ ದಾಖಲಾಗಿತ್ತು.  ನಂತರ ಅ. 1 ರಂದು 2.5 ಹಾಗೂ D. 2 ರಂದು 2.0 ತೀವ್ರತೆಯಲ್ಲಿ ಭೂಕಂಪನ ದಾಖಲಾಗಿತ್ತು.  ಈಗ ಮತ್ತೆ ಭೂಮಿ ಕಂಪಿಸಿರುವುದು ಈ ಭಾಗದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.  ಮಾತ್ರವಲ್ಲ ಈ ಭಾಗದ ಗ್ರಾಮಸ್ಥರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.

 

 

Leave a Reply

ಹೊಸ ಪೋಸ್ಟ್‌