ವಿಜಯಪುರ: ಐಎಎಸ್ ಮತ್ತು ಐಪಿಎಸ್ ಗಳಿಗೆ ಆರ್ ಎಸ್ ಎಸ್ ತರಬೇತಿ ನೀಡುತ್ತದೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.
ವಿಜಯಪುರ ಜಿಲ್ಲೆಯ ಕಗ್ಗೋಡದಲ್ಲಿ ಮಾತನಾಡಿದ ಅವರು, ಅನೇಕ ಅಧಿಕಾರಿಗಳು ಆರ್ ಎಸ್ ಎಸ್ ಸ್ವಯಂ ಸೇವಕರಾಗಿರಬಹುದು. ತಾಲಿಬಾನಿಗಳಂತೂ ಆಗಿಲ್ಲವಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇವರೆಲ್ಲರ ಸರಕಾರ ಇದ್ದಿದ್ದರೆ ತಾಲಿಬಾನಿಗಳನ್ನೇ ಮಾಡುತ್ತಿದ್ದರು. ಆರ್ ಎಸ್ ಎಸ್. ದೇಶ ಭಕ್ತಿ ಕಲಿಸುವ ಸಂಸ್ಥೆ, ಸ್ವಯಂ ಸೇವಕರ ಸಂಘ ಒಳ್ಳೆಯ ಸಂಸ್ಕಾರ ನೀಡುತ್ತದೆ. ಶಾಖೆಗಳ ಮೂಲಕ ಒಳ್ಳೆಯ ಸಂಸ್ಕಾರ ಕಲಿಸಲಾಗುತ್ತದೆ. ಅಧಿಕಾರಿಗಳಿಗೆ ತರಬೇತಿ ನೀಡುವುದಿಲ್ಲ. ಧರ್ಮದ ಸಂಸ್ಕಾರ, ದೇಶಭಕ್ತಿ ಕಲಿಸುವ ಸಂಸ್ಥೆ ಆರ್ ಎಸ್ ಎಸ್ ಆಗಿದೆ. ಈ ರೀತಿ ಹೇಳಿಕೆ ಕೊಟ್ಟು ಕುಮಾರಸ್ವಾಮಿ ಸಣ್ಣವರಾಗುತ್ತಾರೆ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.
ಆರ್ ಎಸ್ ಎಸ್ ದೇಶ ಭಕ್ತಿಯ ಬಗ್ಗೆ ಹೇಳಿದೆ ಎನ್ನುವುದಾದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಅದು ಅಪರಾಧವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಆರ್ ಎಸ್ ಎಸ್ ತಾಲಿಬಾನಿಗಳನ್ನು ತಯಾರು ಮಾಡೊಲ್ಲ. ಭಯೋತ್ಪಾದಕರನ್ನ ತಯಾರು ಮಾಡುವುದಿಲ್ಲ. ಆರ್ ಎಸ್ ಎಸ್ ನವರ ಕೈಯಲ್ಲಿ ಎಕೆ – 47 ಗನ್ ಇರುವುದಿಲ್ಲ. ಆರ್ ಎಸ್ ಎಸ್ ಎಲ್ಲಿಯೂ ಬಾಂಬ್ ಹಾಕಿಲ್ಲ. ಆರ್ ಎಸ್ ಎಸ್ ಬಳಿ ಆತ್ಮಾಹುತಿ ದಳವು ಇಲ್ಲ ಎಂದು ಯತ್ನಾಳ ಟಾಂಗ್ ನೀಡಿದರು.
ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮೀ ಹೀಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಸಿದ್ದರಾಮಯ್ಯನು ಹೀಗೆ ಮಾತಾಡುತ್ತಾರೆ. ಇವರಿಗೆ ಭಯ ಬಂದಿದೆ. ಆರ್ ಎಸ್ ಎಸ್ ಸ್ವಯಂ ಸೇವಕರೇ ದೇಶ ಆಳುತ್ತಿದ್ದಾರೆ. ಅದರಲ್ಲಿ ಏನು ತಪ್ಪಿದೆ? ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಗೃಹ ಮಂತ್ರಿ, ರಕ್ಷಣಾ ಸಚಿವರು ಆರ್ ಎಸ್ ಎಸ್ ಸ್ವಯಂ ಸೇವಕರು. ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಡು. ಅದು ಅವರಿಗೆ ಶೋಭೆ ತರುವುದಿಲ್ಲ ಎಂದು ಅವರು ಕಿವಿಮಾತು ಹೇಳಿದರು.
ಈ ಮುಖಂಡರು ಹೀಗೆಯೇ ಮಾತನಾಡುತ್ತ ಹೋದರೆ ನಾವು ಅವರ ಧಾಟಿಯಲ್ಲಿಯೇ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಯತ್ನಾಳ, ಕುಮಾರಸ್ವಾಮಿ ದಿನ ದಿಂದ ದಿನಕ್ಕೆ ಯಾಕೆ ಇಂಥ ಹೇಳಿಕೆ ಕೊಡುತ್ತಿದ್ದಾರೋ ಗೊತ್ತಿಲ್ಲ. ಈ ರೀತಿ ಹೇಳುವುದನ್ನು ಬಿಟ್ಟು ಕುಮಾರಸ್ವಾಮಿ ಅವರು ಸಮಾಜಕ್ಕೆ ಒಳ್ಳೆಯದಾಗುವ ಸಂದೇಶ ನೀಡಲಿ ಎಂದು ಯತ್ನಾಳ ಹೇಳಿದರು.