ರಾಜ್ಯದ ಮೊದಲ‌ ಆಧುನಿಕ ನೋವು ನಿವಾರಣೆ ಕೇಂದ್ರ ಅ.7 ರಿಂದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಆರಂಭ- ಡಾ. ಆರ್. ಎಸ್. ಮುಧೋಳ

ವಿಜಯಪುರ: ತೀವ್ರ ತರವಾದ ನಾನಾ ನೋವಿನಿಂದ ಬಳಲುವ ರೋಗಿಗಳಿಗೆ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಆಧುನಿಕ ನೋವು ನಿರ್ವಹಣೆ ಕೇಂದ್ರ ವಿಜಯಪುರದಲ್ಲಿ ಆರಂಭವಾಗಲಿದೆ.

ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಅ. 7 ರಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ಉದ್ಘಾಟನೆಯಾಗಲಿದೆ ವಿವಿ ಎಂದು ಉಪಕುಲಪತಿ ಡಾ. ಆರ್. ಎಸ್. ಮುಧೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾತ್ಕಾಲಿಕ ಅನಾರೋಗ್ಯಕ್ಕೆ ಸಂಬಂಧಿಸಿದ ತೀವ್ರನೋವು, ಸಂಧಿವಾತ, ಬೆನ್ನುಮೂಳೆ, ಧೀರ್ಘಕಾಲದ ನೋವು, ತಲೆ ನೋವುಗಳು, ಕ್ಯಾನ್ಸರ್ ಕಾಯಿಲೆಯಿಂದ ಉಂಟಾಗುವ ನೋವುಗಳು, ನಾನಾ ಸಂಧಿನೋವುಗಳು ಸೇರಿದಂತೆ ಹಲವಾರು ಕಾರಣಗಳಿಂದಾಗಿ ನೋವಿನಿಂದ ಬಳಲುತ್ತಿದ್ದು, ರೋಗಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದೆ ಅಥವಾ ಸ್ವಯಂ ತಾವಾಗಿಯೇ ನೋವು ನಿವಾರಕ ಔಷಧಿಗಳನ್ನು ತೆಗೆದುಕೊಂಡು, ತಾತ್ಕಾಲಿಕವಾಗಿ ಉಪಶಮನವಾದರೂ, ಧೀರ್ಘ ಅವಧಿಯವರೆ ರೋಗ ಹಾಗೇ ಉಳಿದು ಬಿಡುತ್ತದೆ.

ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂಥ ನೋವಿನಿಂದ ಬಳಲುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಆ ಕಾರಣಕ್ಕಾಗಿಯೇ ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ನೋವು ನಿರ್ವಹಣೆ ಕೇಂದ್ರ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಮೊದಲನೇ ಮಹಡಿ ಕೊಠಡಿ ಸಂಖ್ಯೆ 200 ರಲ್ಲಿ ಆರಂಭವಾಗಲಿದೆ.

ಮಾಜಿ ಸಚಿವ, ಶಿಕ್ಷಣ ಪ್ರೇಮಿ, ಕೊರೊನಾ ಕಾಯಿಲೆ ಸಂದರ್ಭದಲ್ಲಿ ಸಾವಿರಾರು ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸಿ, ಮಾನವೀಯತೆ ಮೆರೆದ, ಸಂಸ್ಥೆ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಅ. 7 ರಂದು ಗುರುವಾರ ಬೆ.11ಕ್ಕೆ ಈ ಕೇಂದ್ರ ಉದ್ಘಾಟನೆಯಾಗಲಿದೆ.

ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಾನಂದ ಎಲ್. ಕೆ., ಡಾ. ಸಂತೋಷ ಅಳಾಲಮಠ ಅವರು ದೆಹಲಿಯ ಪ್ರಖ್ಯಾತ ಆಸ್ಪತ್ರೆಯಲ್ಲಿ ನೋವು ನಿರ್ವಹಣೆ ಕುರಿತು ಹೆಚ್ಚಿನ ತರಬೇತಿಯನ್ನು ಪಡೆದುಕೊಂಡು ಬಂದಿದ್ದಾರೆ. ಅವರು ಈ ಕೇಂದ್ರದ ಉಸ್ತುವಾರಿಯನ್ನು ನಿರ್ವಹಿಸಲಿದ್ದಾರೆ ಎಂದು ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಅರವಿಂದ ಪಾಟೀಲ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌