ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪ ಉಂಟಾಗಿದೆ.
ಬೆಳಗಿನ ಜಾವ 8.30ರ ಸುಮಾರಿಗೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಸಿಂದಗಿ ಪಟ್ಟಣದ ನಾಗೂರು ಬಡಾವಣೆ, ಶಿವಶಂಕರ ಬಡಾವಣೆ, ವಿದ್ಯಾನಗರ, ಜ್ಯೋತಿ ನಗರ ಸೇರಿದಂತೆ ಇಡೀ ಪಟ್ಟಣಾದ್ಯಂತ ಭೂಕಂಪದ ಅನುಭವವಾಗಿದೆ. ಇದರಿಂದಾಗಿ ಸಿಂದಗಿ ಪಟ್ಟಣದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಶಬ್ದದ ಬಳಿಕ ಭೂಮಿ ಕಂಪಿಸಿದ ಅನುಭವ ಉಂಟಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬಂದು ಅಕ್ಕಪಕ್ಕದ ಮನೆಯವರ ಜೊತೆ ತಮಗಾದ ಅನುಭವ ಹಂಚಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಭೂಕಂಪದ ಭಯ ದಿನೇ ದೊನೇ ಹೆಚ್ಚಾಗುತ್ತಿದೆ. ಈ ಮುಂಚೆ ಅ. 1ರ ಬೆಳಗಿನ ಜಾವ ಇದೇ ಸಿಂದಗಿ ಪಟ್ಟಣದಲ್ಲಿ 5.30ಕ್ಜೆ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಈಗ ಸಿಂದಗಿ ಪಟ್ಟಣದಲ್ಲಿ 2ನೇ ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದಾಗಿ ಈವರೆಗೆ ವಿಜಯಪುರ ಜಿಲ್ಲೆಯಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದಂತಾಗಿದೆ. 3 ಬಾರಿ ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆ ದಾಖಲಾಗಿದೆ. ದಿನದಿಂದ ದಿನಕ್ಕೆ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಸಿಂದಗಿಯಲ್ಲಿ ಉಂಟಾದ ಭೂಕಂಪತ ತೀವ್ರತೆಯ ಮಾಹಿತಿ ಇನ್ನೂ ಸಿಗಬೇಕಿದೆ.