ವಿಜಯಪುರ: ಮಾಜಿ ಸಚಿವ ಎಂ. ಸಿ. ಮನಗೂಳಿ ಬದುಕಿದ್ದಾಗ ತಮ್ಮನ್ನು ಭೇಟಿ ಮಾಡಿ ತಮ್ಮ ಪತ್ರು ಅಶೋಕ ಮನಗೂಳಿ ಅವರನ್ನು ಕಾಂಗ್ರೆಸ್ಸಿಗೆ ಸೇರಿಕೊಳ್ಳುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆದು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಚುನಾವಣೆ ಕಣಕ್ಕಿಳಿಸಿದ್ದೇವೆ ಎಂದು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬೈ ಎಲೆಕ್ಷನ್ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅವರು ಮಾತನಾಡಿದರು. ಸಿಂದಗಿ ಮತ್ತು ಹಾನಗಲ ಎರಡೂ ಬೈ ಎಲೆಕ್ಷನ್ ಬಯಸದೇ ಬಂದಿವೆ. ಹಾನಗಲ್ ಹಾಗೂ ಸಿಂದಗಿಯಲ್ಲಿ ಶಾಸಕರು ನಿಧನರಾದ ಹಿನ್ನಲೆ ಉಪಚುನಾವಣೆ ನಡೆಯುತ್ತಿದೆ. ಮನಗೂಳಿ ಅವರು ಸಾಯೋಗಿಂತ ಮುಂಚೆ ನನಗೆ ಬೇಟಿ ಮಾಡಿದ್ದರು. ತಮ್ಮ ಪುತ್ರ ಅಶೋಕ ಮನಗೂಳಿ ಅವರಿಗೆ ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದು ಹೇಳಿದ್ದರು. ತಮ್ಮ ಮಗನನ್ನು ಕಾಂಗ್ರೆಸ್ಸಿನಲ್ಲಿ ಬೆಳೆಸಬೇಕು ಎಂದು ಮನವಿ ಮಾಡಿದ್ದರು. ಎಂ. ಸಿ. ಮನಗೂಳಿ ಅವರ ಆಶಯದಂತೆ ನಾವು ಜಿಲ್ಲೆಯ ಎಲ್ಲ ನಾಯಕರ ಅಭಿಪ್ರಾಯ ಪಡೆದು ಒಮ್ಮತದಿಂದ ಅಭ್ಯರ್ಥಿಯನ್ನು ಅಯ್ಕೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ಎಂ. ಬಿ. ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಶರಣಪ್ಪ ಸುಣಗಾರ, ಸಿ. ಎಸ್. ನಾಡಗೌಡ, ಪ್ರೊ. ರಾಜು ಆಲಗೂರ, ಪ್ರಕಾಶ ರಾಠೋಡ ಅವರ ಅಭಿಪ್ರಾಯವನ್ನು ಪಡೆದುಕೊಂಡು ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡು ಕಣಕ್ಕಿಳಿಸಿದ್ದೇವೆ. ಎರಡೂ ಕಡೆ ಕಾರ್ಯಕರ್ತರ ಉತ್ಸಾಹ ಅಗಾಧವಾಗಿದೆ. ಮತದಾರರ ನಾಡಿ ಮಿಡಿತ ತಿಳಿದು ಹೇಳುತ್ತಿದ್ದೇನೆ. ಇದೆಲ್ಲವನ್ನು ನೋಡಿದರೆ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವು ಖಚಿತ ಎನಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಸರಕಾರದಿಂದ ಬಡವರಿಗೆ ಒಂದೇ ಒಂದು ಮನೆ ಕೊಡಲು ಆಗಿಲ್ಲ. ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನರು ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಜನರ ಸಿಟ್ಟಾಗಿದ್ದು, ಈಗ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಿದ್ದರಾಗಿದ್ದಾರೆ ಎಂದು ಮಾಜಿ ಸಿಎಂ ಹೇಳಿದರು.
ಬಿಜೆಪಿ ಸರಕಾರ ಭ್ರಷ್ಟ ಸರಕಾರವಾಗಿದೆ. ರಾಜ್ಯದಲ್ಲಿ ಇಂದು ಕೆಟ್ಟ ಪರಿಸ್ಥಿತಿ ಇದೆ. ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಜನರು ಈಗ ತೀರ್ಮಾನಿಸಿದ್ದಾರೆ. ಜೆಡಿಎಸ್ ಪಕ್ಷ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂಬ ಆರೋಪಗಳಿವೆ. ಇಂದು ಮತದಾರರು ಬುದ್ದಿವಂತರಿದ್ದಾರೆ. ಯಾರಿಗೆ ಮತ ಹಾಕಬೇಕು ಎಂಬುದು ಜನರಿಗೆ ಗೊತ್ತಿದೆ ಎಂದು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ತಿಳಿಸಿದರು.