ಬಸವ ಕಲ್ಯಾಣ ಮಾದರಿಯಲ್ಲಿ ಸಿಂದಗಿ ಬೈ ಎಲೆಕ್ಷನ್ ನಲ್ಲಿಯೂ 20 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ- ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ವಿಜಯಪುರು: ಬಸವ ಕಲ್ಯಾಣ ಮಾದರಿಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿಯೂ ಬಿಜೆಪಿ ಅಭ್ಯರ್ಥಿ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಎಂದು ಮಾಜಿ ಡಿಸಿಎಂ ಮತ್ತು ಸಿಂದಗಿ ಬಿಜೆಪಿ ಉಸ್ತುವಾರಿ ಲಕ್ಷ್ಮಣ ಸವದಿ ಭವಿಷ್ಯ ನುಡಿದಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರಕ್ಕೆ ಬಿಜೆಪಿ ಏಳು ತಂಡಗಳನ್ನ ರಚನೆ ಮಾಡಿದೆ.  ನಾನಾ ಸಚಿವರು, ವಿಜಯಪುರ ಸಂಸದ ರಮೇಶ ಜಿಗಜಿಣಗಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ಬಿಜೆಪಿ ಶಾಸಕರನ್ನು ಒಳಗೊಂಡ ತಂಡ ರಚನೆ ಮಾಡಲಾಗಿದೆ.  ಸಿಂದಗಿ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಏಳು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಗಳಿಗೆ ಒಂದೊಂದು ತಂಡಗಳು ಗೆಲುವಿನ ರಣತಂತ್ರ ರೂಪಿಸಲು ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿದೆ.  ಹೀಗಾಗಿ ಬಿಜೆಪಿ ಅಭ್ಯರ್ಥಿ ರಮೇಶ ಭೂರನೂರ ಈ ಬಾರಿ 20 ಸಾವಿರ ಅಂತರದಿಂದ ಗೆಲ್ಲಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿಜೆಪಿಗೆ ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಮತಗಳು ಬರಲಿವೆ.  ಚುನಾವಣೆ ಗೆಲ್ಲಲು ಈಗಾಗಲೇ ಎರಡು ಸುತ್ತಿನ ಕಾರ್ಯಕರ್ತರ ಸಭೆ ನಡೆದಿವೆ.  ಜನರ ನಾಡಿ ಮಿಡಿತ ಅರಿತಿದ್ದೇವೆ.  ಜನರ ಆಶೀರ್ವಾದದಿಂದ ಈ ಬಾರಿ ರಮೇಶ ಭೂಸನೂರ ಅವರ ಆಯ್ಕೆ ಖಚಿತ ಎಂದು ಹೇಳಲು ಬಯಸುತ್ತೇನೆ.  ಕಾರ್ಯಕರ್ತರಲ್ಲಿಯೂ ಬಹಳ ದೊಡ್ಡ ಉತ್ಸಾಹವಿದೆ.  ಸತತ ಮೂರು ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ,  ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಇಲ್ಲಿ ಸೋತಿದ್ದರು.  ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸೋತಿರುವ ಸಣ್ಣ ನೋವು ಕಾರ್ಯಕರ್ತರು ಮತ್ತು ಮತದಾರರಲ್ಲಿದೆ.  ಈ ಅವಕಾಶ ಬಳಸಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಾವಿರಾರು ಕಾರ್ಯಕರ್ತರು ಈಗ ಮನೆ ಮನೆ ಬೂತ್ ಮಟ್ಟದಲ್ಲಿ ಮನೆಮನೆಗೆ ತೆರಳಲು ಸಿದ್ಧರಾಗಿದ್ದಾರೆ ಎಂದು ಅವರು ತಿಳಿಸಿದರು.

ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಗಿದ ನಂತರ ತಾವು, ಸಿ. ಸಿ. ಪಾಟೀಲ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸೋಮಣ್ಣ ಎಲ್ಲರೂ ಚುನಾವಣೆ ಮುಗಿಯುವ ವರೆಗೆ ಇಲ್ಲಿಯೇ ಇರುತ್ತೇವೆ.  ಬೇರೆ ಬೇರೆ ಮುಖಂಡರೂ ಪ್ರಚಾರಕ್ಕೆ ಬರುತ್ತಾರೆ.  ಲೋಕಸಭೆ ಸದಸ್ಯರು ನಮ್ಮ ಜೊತೆ ನಿರಂತರವಾಗಿ ಇರುತ್ತಾರೆ.  ಈಶ್ವರಪ್ಪ ಮಧ್ಯೆ ಎರಡು ದಿನ ಪ್ರಚಾರಕ್ಕೆ ಬರುತ್ತಾರೆ.  ಮುಖ್ಯಮಂತ್ರಿಗಳೂ ಎರಡು ದಿನ ಪ್ರಚಾರಕ್ಕೆ ಬರುತ್ತಾರೆ.  ಯಡಿಯೂರಪ್ಪ ಕೂಡ ಎರಡು ದಿನ ಪ್ರಚಾರಕ್ಕೆ ಬರುತ್ತಾರೆ.  ನಮ್ಮ ಪಕ್ಷದ ಎಲ್ಲ ಮುಖಂಡರು ಒಟ್ಟಾಗಿ, ಒಂದಾಗಿ ಎರಡೂ ಬೈ ಎಲೆಕ್ಷನ್ ಗಳನ್ನು ಗೆಲ್ಲುತ್ತೇವೆ.  ಬಸವ ಕಲ್ಯಾಣದಲ್ಲಿ 21 ಸಾವಿರ ಮತಗಳ ಅಂತರದಿಂದ ಗೆದ್ದಂತೆ ಇಲ್ಲಿಯೂ ಭಾರಿ ಅಂತರದಿಂದ ಗೆಲ್ಲುತ್ತೇವೆ.  ಇಲ್ಲಿ ಜಿಲ್ಲೆಯ ಅನೇಕ ಶಾಸಕರು, ಪ್ರಮುಖ ಮುಖಂಡರು ಈ ಕ್ಷೇತ್ರವನ್ನು ಗೆಲ್ಲಲೇ ಬೇಕು ಎಂಬ ಉತ್ಸಾಹದಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಆಯ್ಕೆ ವಿಳಂಬವಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಿಂದ ಮೊದಲೇ ಅಭ್ಯರ್ಥಿ ಪಟ್ಟಿ ಕಳುಹಿಸಿ ಕೊಡಲಾಗಿತ್ತು.  ಉತ್ತರ ಭಾರತದಲ್ಲಿ ನವರಾತ್ರಿ ಹಿನ್ನೆಲೆ ಅಮವಾಸ್ಯೆ ಕಳೆದ ಮೇಲೆ ಅಭ್ಯರ್ಥಿ ಹೆಸರು ಪ್ರಕಟ ಮಾಡಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಸಿ. ಸಿ. ಪಾಟೀಲ, ಕೆ. ಎಸ್.ಈಶ್ವರಪ್ಪ, ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌