ಬೆಂಗಳೂರು: ಉದ್ಯಮ ರಂಗವು ನಿರೀಕ್ಷಿಸುವಂಥ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಹತ್ವಾಕಾಂಕ್ಷೆಯಿಂದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ನಾಸ್ಕಾಂ(ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವೀಸ್ ಕಂಪನೀಸ್) ಜೊತೆ ಒಡಂಬಡಿಕೆಗೆ ಸಹಿ ಹಾಕಿದೆ.
ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಈ ಮಹತ್ವದ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.
ಬಳಿಕ ಮಾತನಾಡಿದ ಸಚಿವರು, ಒಡಂಬಡಿಕೆಯು ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಇದರಿಂದ ಪ್ರತಿ ವರ್ಷ 5 ಲಕ್ಷ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಲಾಭವಾಗಲಿದೆ ಎಂದು ಹೇಳಿದರು.
ಈ ಉಪಕ್ರಮದಿಂದಾಗಿ ನಾಸ್ಕಾಂನ ಫ್ಯೂಚರ್ ಸ್ಕಿಲ್ಸ್ ಪ್ರೈಮ್ ವೇದಿಕೆಯಲ್ಲಿರುವ ಕೌಶಲ್ಯಾಭಿವೃದ್ಧಿ ಕೋರ್ಸುಗಳು ರಾಜ್ಯದ ಪದವಿ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಆನ್-ಲೈನ್ ಮೂಲಕ ಸುಲಭವಾಗಿ ಲಭ್ಯವಾಗಲಿವೆ. ಈ ಒಡಂಬಡಿಕೆಯಲ್ಲಿ ಗುಣಮಟ್ಟದಿಂದ ಕೂಡಿರುವ ಕೋರ್ಸುಗಳು, ಬೋಧಕ ಸಿಬ್ಬಂದಿಗೆ ತರಬೇತಿ ಮತ್ತು ಮೂಲಸೌಲಭ್ಯ ಸಂಪನ್ಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮೂರು ವರ್ಷಕ್ಕೆ ಮೂರು ಕೋರ್ಸ್
ಈ ಒಡಂಬಡಿಕೆಯ ಫಲವಾಗಿ, ಕಂಪ್ಯೂಟರ್ ವಿಜ್ಞಾನವನ್ನು ಹೊರತುಪಡಿಸಿ ಬೇರೆ ವಿಭಾಗಗಳಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಪದವಿಯ ಮೊದಲನೇ ವರ್ಷದಲ್ಲಿ ಡಿಜಿಟಲ್ ಫ್ಲೂಯೆನ್ಸಿ, ಎರಡನೇ ವರ್ಷದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ) ಮತ್ತು ಮೂರನೇ ವರ್ಷದಲ್ಲಿ ಸೈಬರ್ ಸೆಕ್ಯುರಿಟಿ ಕೋರ್ಸುಗಳು ಲಭ್ಯವಾಗಲಿವೆ. ಇವುಗಳ ಕಲಿಕೆ ಕಡ್ಡಾಯವಾಗಿದೆ. ಈ ಕೋರ್ಸುಗಳನ್ನು ಮೈಕ್ರೋಸಾಫ್ಟ್ ಮತ್ತು ಸಿಸ್ಕೋ ಕಂಪನಿಗಳು ರೂಪಿಸಿವೆ. ಇವುಗಳ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸಲಾಗುವುದು. ಇದನ್ನು ಕಲಿಯಲು ಯಾವುದೇ ಶುಲ್ಕದ ಹೊರೆ ಇರುವುದಿಲ್ಲ ಎಂದು ಸಚಿವರು ವಿವರಿಸಿದರು.
ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟಫೋನುಗಳ ಮೂಲಕವೂ ಈ ಆನ್-ಲೈನ್ ಕೋರ್ಸುಗಳನ್ನು ಸುಲಭವಾಗಿ ಕಲಿಯಬಹುದು. ನಾಸ್ಕಾಂನ ಈ ಕೋರ್ಸುಗಳು ಎನ್ ಎಸ್ ಕ್ಯೂಎಫ್(ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಶನ್ ಫ್ರೇಂವರ್ಕ್) ರೂಪಿಸಿರುವ ಗುಣಮಟ್ಟ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ಉದ್ಯೋಗ ಕ್ಷೇತ್ರ ಬಯಸುವ ಕೌಶಲ್ಯಗಳನ್ನು ಬೆಳೆಸಲು ಒತ್ತು ಕೊಟ್ಟಿದೆ. ಅಲ್ಲದೇ, ಭಾರತವನ್ನು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ಪ್ರತಿಭೆಗಳ ತೊಟ್ಟಿಲನ್ನಾಗಿ ಮಾಡುವುದು ಕೇಂದ್ರ ಸರಕಾರದ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಡೀ ದೇಶದಲ್ಲಿ ನಾಸ್ಕಾಂ ಜೊತೆ ಸೇರಿಕೊಂಡು ಇಂತಹ ಒಡಂಬಡಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ರಾಜ್ಯದಲ್ಲಿಯೂ ಡಿಜಿಟಲ್ ಯುಗಕ್ಕೆ ಸಮರ್ಥವಾಗಿ ಪರಿವರ್ತನೆ ಹೊಂದಲಾಗುವುದು. ಇದಕ್ಕಾಗಿ ರಾಜ್ಯ ಸರಕಾರವು ಯಾವುದೇ ವೆಚ್ಚವನ್ನು ಮಾಡಬೇಕಾಗಿಲ್ಲ ಎಂದು ಅವರು ವಿವರಿಸಿದರು.
ದೇಶದ ಐಟಿ ಸೇವಾ ವಲಯವು ಈಗ ವರ್ಷಕ್ಕೆ ರೂ. 150 ಶತಕೋಟಿ ಡಾಲರ್ ವಹಿವಾಟು ನಡೆಸುತ್ತಿದೆ. ಇದು 2025ರ ಹೊತ್ತಿಗೆ ರೂ. 350 ಶತಕೋಟಿ ಡಾಲರ್ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆಯಲಿದೆ. ಈಗ ರಾಷ್ಟ್ರದಲ್ಲಿರುವ ಡಿಜಿಟಲ್ ಪ್ರತಿಭಾವಂತರಿಗಿಂತ ಎಂಟು ಪಟ್ಟು ಹೆಚ್ಚಿನ ಬೇಡಿಕೆ ಇದೆ 2024ರ ವೇಳೆಗೆ ಇದು 20 ಪಟ್ಟು ಹೆಚ್ಚಾಗಲಿದೆ. ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿ, ಹೊಸ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ದೇಶದಲ್ಲಿ ಈಗ ಸಾಕಷ್ಟು ಉದ್ಯೋಗಗಳು ಲಭ್ಯವಾಗುತ್ತಿವೆ. ಆದರೆ, ಅದಕ್ಕೆ ಅರ್ಹರಾದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಇಂದು ತಂತ್ರಜ್ಞಾನದ ನೆರವಿಲ್ಲದೆ ಯಾವ ವೃತ್ತಿಯನ್ನೂ ಸಮರ್ಥವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಇದನ್ನು ಮನಗಂಡು, ನಾವು ಸಕಾರಾತ್ಮಕವಾಗಿ ಇಂತಹ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಎನ್ಇಪಿ ಜಾರಿಯಲ್ಲಿ ಕರ್ನಾಟಕವು ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ ಎಂದು ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಈ ಸಂದರ್ಭದಲ್ಲಿ ನಾಸ್ಕಾಂ ಪರವಾಗಿ ನವನೀತ್ ಸಮೈಯಾರ್ ಮತ್ತು ದಿನೇಶ್ ಕುಮಾರ್ ಪಾಣಿಗ್ರಾಹಿ ಉಪಸ್ಥಿತರಿದ್ದು ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.
ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ, ಕಾರ್ಯ ನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ, ಆಡಳಿತಾಧಿಕಾರಿ ಡಾ. ಟಿ. ಎನ್. ತಾಂಡವೇಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.