ವಿಜಯುರ: ಕರ್ನಾಟಕದಲ್ಲಿ ಲೂಟಿ ಹೊಡೆದ ಹಣದಿಂದ ಕುಮಾರಸ್ವಾಮಿ ಜೊತೆಗೂಡಿ ಹೊಸ ಪಕ್ಷ ರಚನೆಗೆ ಮುಂದಾಗಿದ್ದೆ ಐಟಿ ಧಾಳಿಗೆ ಕಾರಣ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಭ್ರಷ್ಡಾಚಾರದ ಹಣದಿಂದ ರಾಜ್ಯದಲ್ಲಿ ಬಿಜೆಪಿಗೆ ಬುದ್ದಿ ಕಲಿಸಲು ಹೊಸ ಪಕ್ಷ ಕಟ್ಟಲು ಮುಂದಾಗಿದ್ದರು. ಈಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಮೂಲಕ ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಧಾಳಿಯ ಕಾರಣವನ್ನು ಯತ್ನಾಳ ಬಹಿರಂಗ ಪಡಿಸಿದ್ದಾರೆ.
ಈ ಧಾಳಿಯ ಹಿಂದೆ ಕೇಂದ್ರ ಸರಕಾರದ ಕೈವಾಡವಿದೆ ಎನ್ನುವುದು ಸರಿಯಲ್ಲ. ನಾ ಖಾವೂಂಗಾ, ನಾ ಖಾನೆ ದೂಂಗಾ ಎಂದು ಪ್ರಧಾನ ಮಂತ್ರು ನರೇಂದ್ರ ಮೋದಿ ಮೊದಲೇ ಹೇಳಿದ್ದಾರೆ. ನೀವು ಲೂಟಿಯನ್ನು ಮಾಡಿರದಿದ್ದರೆ ಆದಾಯ ತೆರೆಗೆ ಇಲಾಖೆ ಅಧಿಕಾರಿಗಳು ಯಾಕೆ ದಾಳಿ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ನಾನು ಲೂಟಿ ಮಾಡಿದರೂ ಕೂಡ ಅದು ಭ್ರಷ್ಟಾಚಾರ. ನಮ್ಮ ಮನೆಯಲ್ಲಿ ಏನೂ ಇಲ್ಲ. ಅದಕ್ಕೆ ಐಟಿ ರೇಡ್ ಆಗಿಲ್ಲ. ಐಟಿ ರೇಡ್ ನಲ್ಲಿ ಯಾರದೇ ಹಸ್ತಕ್ಷೇಪ ಇಲ್ಲ ಎಂದು ತಿಳಿಸಿದರು.
ಈಗ ನಡೆಸಿರುವ ಐಟಿ ಧಾಳಿಯಲ್ಲಿ ರೂ.4000 ಕೋ. ದಿಂದ ರೂ. 5000 ಕೋ. ಭ್ರಷ್ಟಾಚಾರದ ದಾಖಲೆಗಳು ಸಿಕ್ಕಿವೆ. ರೂ. 10000 ಕೋ. ಲೂಟಿಯಾಗಿದೆ. ಗುತ್ತಿಗೆದಾರ ಉಪ್ಪಾರ ಅವರ ಹೆಸರಿನಲ್ಲಿ ರೂ. 1500 ಕೋ. ಬೋಗಸ್ ಬಿಲ್ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಿದರು.
ನಾನು ಈ ಹಿಂದೆ ಬಿ. ಎಸ್. ಯಡಿಯೂರಪ್ಪ ಕುಟುಂಬದವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದೆ. ಆಗ ನನ್ನನ್ನು ಲಿಂಗಾಯಿತ ಸಿಎಂ ವಿರೋಧಿ ಎಂದು ಆರೋಪಿಸಿದರು. ಈಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ ಭ್ರಷ್ಟಾಚಾರ ಪತ್ತೆ ಮಾಡಿದ್ದಾರೆ. ಈಗಲಾದರೂ ನಾನು ಈ ಹಿಂದೆ ಮಾಡಿದ್ದ ಆರೋಪಗಳು ಸತ್ಯವಾಗಿವೆ ಎಂದು ಈಗ ರಾಜ್ಯದ ಜನತೆಗೆ ಗೊತ್ತಾಗಿದೆ ಅಲ್ವಾ ಎಂದು ಯತ್ನಾಳ ಪ್ರಶ್ನಿಸಿದರು.
ಬಿಎಂಟಿಎಸ್ ಬಸ್ ಕಂಡಕ್ಟರ್ ಮನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರದ ದಾಖಲೆಗಳು ಸಿಕ್ಕಿವೆ. ಅವನೇನು ಟಾಟಾ, ಬಿರ್ಲಾ ಮಗನಾ? ಈಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ಯತ್ನಾಳ ಖಾರವಾಗಿ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಡಿ. ಕೆ. ಶಿವಕುಮಾರ, ಎಚ್. ಡಿ. ಕುಮಾರಸ್ವಾಮಿ, ಎಸ್. ಸಿದ್ಧರಾಮಯ್ಯ ಸೇರಿದಂತೆ ಯಾರೇ ಲೂಟಿ ಮಾಡಿದರೂ ಅದು ಭ್ರಷ್ಟಾಚಾರವೇ ಎಂದು ಅವರು ಹೇಳಿದರು.
ನಾನ್ಯಾನೆ ಐಟಿಯವರಿಗೆ ಮಾಹಿತಿ ನೀಡಲಿ? ಎರಡು ವರ್ಷಗಳಿಂದ ಇಂಟಲಿಜನ್ಸ್ ನವರ ಬಳಿ ಎಲ್ಲ ಮಾಹಿತಿ ಇದೆ. ಯಾರು, ಎಲ್ಲಿ, ಯಾರಿಗೆ ಮತ್ತು ಎಷ್ಟು ಗಣ ನೀಡಿದ್ದಾರೆ. ಯಾವ ಬಂಬರಿನ ನೋಟು ಕೊಟ್ಟಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ, ಐಟಿಯವರು ಸುಮ್ಮನಿದ್ದರು. ಆದರೆ, ಈಗ ಅವರು ಉಪಾದ್ಯಾಪಿ(ಉದ್ಧಟತನ) ಮಾಡಿದ್ದರಿಂದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈಗ ಸರಿಯಾದ ಕೆಲಸ ಮಾಡಿದ್ದಾರೆ ಎಂದು ಯತ್ನಾಳ ಬಿ. ಎಸ್. ಯಡಿಯೂರಪ್ಪ ಹೆಸರು ಹೇಳದೇ ಐಟಿ ಧಾಳಿಯ ರಹಸ್ಯ ಬಹಿರಂಗ ಪಡಿಸಿದ್ದಾರೆ.