ವಿಜಯಪುರ: ಸೋದರ ಸಂಬಂಧಿ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಪೊಕ್ಸೊ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು ರೂ. 20 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗ್ರಾಮವೊಂದರಲ್ಲಿ ಜಟ್ಟೆಪ್ಪ ದೇವೇಂದ್ರಪ್ಪ ಚಲವಾದಿ(22) ಎಂಬ ಯುವಕ ತನ್ನ ಸೋದರ ಸಂಬಂಧಿ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಪೀಡಿಸುತ್ತಿದ್ದ. ಈ ಕುರಿತು ಬಾಲಕಿಯ ಸಂಬಂಧಿಕರು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಆತ ತನ್ನ ದುರ್ವರ್ತನೆ ಮುಂದುವರೆಸಿದ್ದ. ಈ ಮಧ್ಯೆ, 24.06.2017ರಲ್ಲಿ ಅಪ್ರಾಪ್ತ ಬಾಲಕಿ ದೇವಸ್ಥಾವೊಂದಕ್ಕೆ ಹೋಗಿರುವ ವಿಚಾರ ತಿಳಿದ ಆರೋಪಿ ಜಟ್ಟೆಪ್ಪ ದೇವೇಂದ್ರಪ್ಪ ಚಲವಾದಿ ಬಾಲಕಿಯನ್ನು ಭೇಟಿಯಾಗಿ ಪ್ರೀತಿಸುವಂತೆ ಮತ್ತು ಮದುವೆಯಾಗುವಂತೆ ಒತ್ತಾಯಿಸಿದ್ದ. ಅಲ್ಲದೇ, ತನ್ನ ಜೊತೆ ಬರದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಆಗ ಪೊಲೀಸರು ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಜೈಲಿಗೆ ಹಾಕುತ್ತಾರೆ ಎಂದು ಹೆದರಿಸಿ ಮಾನಸಿಕ ಹಿಂಸೆ ನೀಡಿ ಆಕೆಯನ್ನು ಬಸವಂತದಿಂದ ತನ್ನ ಜೊತೆ ಕರೆದುಕೊಂಡು ಹೋಗಿದ್ದ. ಮೊದಲಿಗೆ ವಿಜಯಪುರಕ್ಕೆ ನಂತರ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರಕ್ಕೆ ಹಾಗೂ ನಂತರ ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲದೇ, ಅಲ್ಲಿನ ಲಾಜ್ಡ್ ನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಯ ವಿರುದ್ಧ ವಿಜಯಪುರ ಜಿಲ್ಲೆಯ ಬಸವನ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ(ವಿಶೇಷ ಪೋಕ್ಸೋ) ನ್ಯಾಯಾಲಯ ಆರೋಪಿಗೆ ಎರಡು ಕಲಂ 366ರ ಅಡಿ 2 ವರ್ಷ ಶಿಕ್ಷೆ ಮತ್ತು ರೂ. 10 ಸಾವಿರ ದಂಡ ಮತ್ತು ಕಲಂ 343ರ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಮತ್ತು ರೂ. 10 ಸಾವಿರ ದಂಡ ಶಿಕ್ಷೆ ನೀಡಿ ನ್ಯಾಯಾಧೀಶರಾದ ಸವಿತಾಕುಮಾರಿ ಎನ್. ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ಆರೋಪಿ ಆಗ 2 ವರ್ಷ ಜೈಲು ಶಿಕ್ಷೆ ಎದುರಿಸಬೇಕು ಮತ್ತು ರೂ. 20 ಸಾವಿರ ದಂಡ ಪಾವತಿಸಬೇಕಾಗಿದೆ ಎಂದು ಸರಕಾರಿ ಅಭಿಯೋಜಕ ವಿ. ಜಿ. ಹಗರಗೊಂಡ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.