ವಿಜಯಪುರ: ಪೋಲಂಡ ದೇಶದ ಲುಬ್ಲಿನ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಅ. 14 ಮತ್ತು 15 ರಂದು ಎರಡು ದಿನಗಳ ಕಾಲ ಶಕ್ತಿ ಕೋಯ್ಲು ಕುರಿತು ಎರಡು ದಿನಗಳ ಕಾರ್ಯಾಗಾರ ಆಯೋಜಿಸಿದೆ. ಆನಲೈನ್ ಮೂಲಕ ನಡೆಯುತ್ತಿರುವ ಈ ಕಾರ್ಯಾಗಾರದಲ್ಲಿ ಒಂದು ಅಧಿವೇಶನ(ಸೆಷನ್) ಜಂಟಿಯಾಗಿ ನಡೆಸಲು ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮತ್ತು ಚನ್ನೈನ ಐಐಟಿ ಮದ್ರಾಸ್ ಅವಕಾಶ ನೀಡಲಾಗಿದೆ.
ಎರಡು ದಿನಗಳ ಕಾಲ ನಡೆಯುವ EHDIALOG ಅಂದರೆ ಶಕ್ತಿ ಕೋಯ್ಲು ಕಾರ್ಯಾಗಾರದ ಮೊದಲ ದಿನ ಅ. 14ರಂದು ಭಾರತದ ಎರಡು ಕಾಲೇಜುಗಳಿಗೆ ಸಂ. 5 ರಿಂದ 6.30ರ ವರೆಗೆ ಅಧಿವೇಶನ ನಡೆಸಲು ಅವಕಾಶ ಲಭಿಸಿದೆ.
ಶಕ್ತಿ ಕೋಯ್ಲು ನಾವಿನ್ಯತೆಯ ಭಾಗವಾಗಿ ನಡೆಸಲಾಗುತ್ತಿರುವ ಕಾರ್ಯಾಗಾರದ ಈ ಅಧಿವೇಶನವನ್ಮು ವಿಜಯಪುರದ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನ ಉಪಪ್ರಾಚಾರ್ಯ ಪ್ರೊ. ಪ್ರದೀಪ ಮಾಳಜಿ ಮತ್ತು ಐಐಟಿ ಮದ್ರಾಸಿನ ಡಾ. ಎಸ್. ಎಫ್. ಅಲಿ ಜಂಟಿಯಾಗಿ ಆಯೋಜಿಸಿದ್ದಾರೆ.
ಐಐಟಿ ಕಾನ್ಪುರದ ಪ್ರೊ. ಬಿಶಾಖ್ ಭಟ್ಟಾಚಾರಿ ಈ ಅಧಿವೇಶನದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ವಿಜಯಪುರದ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜು ಮತ್ತು ಐಐಟಿ ಮದ್ರಾಸ್‌ನ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ಈ ಸಂಸರ್ಭದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಅಲ್ಲದೇ, ಯುಎಸ್ಎ, ಜರ್ಮನಿ, ಬ್ರೆಜಿಲ್, ಜೆಕ್ ಗಣರಾಜ್ಯ, ಚೀನಾ ಮತ್ತು ಇತರ ದೇಶಗಳ ಪ್ರಾಧ್ಯಾಪಕರು ಈ ಸಮ್ಮೇಳನದ ಭಾಗವಾಗಿ ಅಧಿವೇಶನಗಳನ್ನು ಆಯೋಜಿಸುತ್ತಿದ್ದಾರೆ ಎಂದು ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಅತುಲ್ ಆಯಾರೆ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳನ್ನು http://cine.edu.pl ಲಭ್ಯವಿದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಚೆನ್ನೈ ಹೊರತು ಪಡಿಸಿದರೆ ಬಸವ ನಾಡಿನ ಎಂಜಿನಿಯರಿಂಗ್ ಕಾಲೇಜಿಗೆ ಈ ಅಂತಾರಾಷ್ಟ್ರೀಯ ಕಾರ್ಯಾಗಾರದ ಒಂದು ಅಧಿವೇಶನ ನಡೆಸಲು ಅವಕಾಶ ಸಿಕ್ಕಿರುವುದು ಗಮನಾರ್ಹವಾಗಿದೆ.