ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದು- ಸಿಟ್ಟಾದ ಕಿಚ್ಚನ ಅಭಿಮಾನಿಗಳಿಂದ ಸಿನೇಮಾ ಮಂದಿರದ ಮೇಲೆ ಕಲ್ಲು ತೂರಾಟ- ಮೂರ್ನಾಲ್ಕು ಜನ ಪೊಲೀಸ್ ವಶಕ್ಕೆ

ವಿಜಯಪುರ: ಕೋಟಿಗೊಬ್ಬ- 3 ಸಿನೇಮಾ ಪ್ರದರ್ಶನ ರದ್ದಾಗಿದ್ದರಿಂದ ಸಿಟ್ಟಾದ ಅಭಿಮಾನಿಗಳು ಸಿನೇಮಾ ಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಗುಮ್ಮಟ ನಗರಿ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ನಗರದ ಬಸ್ ನಿಲ್ದಾಣ ರಸ್ತೆಯಲ್ಲಿರುವ ಡ್ರೀಮಲ್ಯಾಂಡ್ ಚಿತ್ರ ಮಂದಿರದಲ್ಲಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ- 3 ಸಿನೇಮಾ ಮೊದಲ ಪ್ರದರ್ಶನ ಆಯೋಜಿಸಲಾಗಿತ್ತು.  ಆದರೆ, ಕೋಟಿಗೊಬ್ಬ- 3 ಚಿತ್ರ ಪ್ರದರ್ಶನ ರದ್ದು ಮಾಡಲಾಯಿತು.  ತಮ್ಮ ನೆಚ್ಚಿನ ನಟನ ಸಿನೇಮಾವನ್ನು ಮೊದಲ ಪ್ರದರ್ಶನದಲ್ಲಿಯೇ ನೋಡಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿನೇಮಾ ರದ್ದು ವಿಷಯ ತಿಳಿಯುತ್ತಿದ್ದಂತೆ ಸಿಟ್ಟು ಸ್ಪೋಟಗೊಂಡಿದೆ.  ಆಗ ಕಿಚ್ಚ ಸುದೀಪ ಅಭಿಮಾನಿಗಳು ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ.  ಕಿಚ್ಚಾ ಕಿಚ್ಚಾ ಎಂದು ಘೋಷಣೆ ಹಾಕಿ ಹಾಕಿದ  ಅಭಿಮಾನಿಗಳು, ಸಿನೇಮಾ ಮಂದಿರದ ಬಂದ್ ಮಾಡಿರುವ ಪ್ರವೇಶ ದ್ವಾರಕ್ಕೆ ನುಗ್ಗಲು ಯತ್ನಿಸಿದ್ದಾರೆ.  ಕಾಲನಿಂದ ಗೇಟ್ ನ್ನು ಒದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅಷ್ಟೇ ಅಲ್ಲ, ಕಲ್ಲು ತೂರಾಟ ನಡೆಸಿ ಸಿನೇಮಾ ಮಂದಿರದ ವಿದ್ಯುತ್ ದೀಪಗಳನ್ನು ಪುಡಿ ಪುಡಿ ಮಾಡಿದ್ದಾರೆ.

ಲಾಕಡೌನ್ ನಿಂದಾಗಿ ಬಹುತೇಕ ಹೊಸ ಸಿನೇಮಾಗಳ ಬಿಡುಗಡೆ ವಿಳಂಬವಾಗಿವೆ.  ಈಗ ದಸರಾ ಹಬ್ಬದ ಸಡಗರ ಬೇರೆ ಇದೆ.  ಈ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ನಟ ಸುದೀಪ ಸಿನೇಮಾ ಬಿಡುಗಡೆ ಆಗುತ್ತಿರುವುದರಿಂದ ಅಭಿಮಾನಿಗಳು ಒಂದು ಟಿಕೆಟ್ ಗೆ ರೂ. 150 ರಿಂದ ರೂ. 500 ಕೊಟ್ಟು ಟಿಕೇಟ್ ಖರೀದಿಸಿದ್ದರು.  ಆದರೆ, ಸಿನೇಮಾ ಪ್ರದರ್ಶನ ರದ್ದು ಮಾಡಲಾಗಿದೆ ಎಂಬ ವಿಷಯ ತಿಳಿದು ಸಿಟ್ಟಿನಿಂದ ಚಿತ್ರಮಂದಿರದ ಬಾಗಿಲಿನ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕೈಯಲ್ಲಿ ಕಟ್ಟಿಗೆಯನ್ನು ತೆಗೆದುಕೊಂಡು ಬಂದು ಬಾಗಿಲಿಗೆ ಹೊಡೆದು ಒಡೆಯಲು ಪ್ರಯತ್ನಿಸಿದ್ದಾರೆ.

ಈ ಮಧ್ಯೆ ಸಿನೇಮಾ ಬಿಡುಗಡೆ ಇದ್ದರೂ ಈ ಘಟನೆ ಅನಿರೀಕ್ಷಿತವಾಗಿದ್ದರಿಂದ ಯಾರೊಬ್ಬ ಪೊಲೀಸರು ಸ್ಥಳದಲ್ಲಿ ಇರಲಿಲ್ಲ.  ಮೇಲಾಗಿ ದಸರಾ ಆಯುಧ ಪೂಜೆ ಹಿನ್ನೆಲೆಯಲ್ಲಿ ಪೊಲೀಸರು ತಂತಮ್ಮ ಠಾಣೆಗಳಲ್ಲಿ ಪೂಜೆಯಲ್ಲಿ ನಿರತರಾಗಿದ್ದರು.  ಕಿಚ್ಚನ ಅಭಿಮಾನಿಗಳಿಂದ ಕಲ್ಲು ತೂರಾಟದ ಈ ಸುದ್ದಿ ತಿಳಿದ ವಿಜಯಪುರ ನಗರದ ಗಾಂಧಿಚೌಕ್ ಠಾಣೆಯ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ.  ಅಲ್ಲದೇ, ಗುಂಪು ಸೇರಿ ಕಲ್ಲು ತೂರಾಟ ನಡೆಸುತ್ತಿದ್ದವರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಅಲ್ಲಿದ್ದ ಜನರನ್ನು ಚದುರಿಸಿದ್ದಾರೆ.

ಈಗ ಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ, ಸಿನೇಮಾ ಮಂದಿರದ ಆವರಣದಲ್ಲಿ ಕಲ್ಲುಗಳು, ಕಿಟಕಿಟ ಪುಡಿಯಾದ ಗಾಜುಗಳು ಬಿದ್ದಿದ್ದು, ಇಲ್ಲಿ ನಡೆದ ಘಟನೆಗೆ ಸಾಕ್ಷಿಯಾಗಿವೆ.

 

Leave a Reply

ಹೊಸ ಪೋಸ್ಟ್‌