ಡಬಲ್ ಎಂಜಿನ ಸರಕಾರದಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದಾರೆ- ಬೆಲೆ ಏರಿಕೆ ಜನಜೀವನವನ್ನು ಮತ್ತೆ ಹಳೆಯ ದಿನಗಳಿಗೆ ತಳ್ಳುತ್ತಿದೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ: ಡಬಲ್ ಎಂಜಿನ್ ಸರಕಾರದಿಂದ ದೇಶ ಮತ್ತು ರಾಜ್ಯದಲ್ಲಿ ಜನಸಾಮಾನ್ಯರು ಹೈರಾಣಾಗಿದ್ದು, ಜನತೆಯ ಬದುಕನ್ನು ಹಳೆಯ ದಿನಗಳತ್ತ ತಳ್ಳುತ್ತಿದೆ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಆರೋಪಿಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಅವರು, ಆಲಮೇಲ ತಾಲೂಕಿನ ರಾಮನಳ್ಳಿ, ಗುಡ್ಡಳ್ಳಿ, ತೋಂಟಾಪುರ, ವಿಭೂತಿಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು.

 

 

ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಹಳ್ಳಿ ಹಳ್ಳಿಗೂ ತಲುಪಿದೆ.  ಪ್ರತಿಯೊಬ್ಬರ ಬೆರಳ ತುದಿಯಲ್ಲಿ ವ್ಯವಹಾರ ನಡೆಸುವ ಸೌಲಭ್ಯವಿದೆ.  ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ದುರಾಡಳಿತದಿಂದಾಗಿ ಇಂದು ಬಡವರಿಗೆ ಬದುಕು ದುಬಾರಿಯಾಗಿದೆ.  ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದಾಗಿ ಬಡವರು ಮತ್ತೆ ಹಳೆಯ ಪದ್ಧತಿಯಂತೆ ಅಡುಗೆ ತಯಾರಿಸಲು ಒಲೆ ಹಚ್ಚಬೇಕಾಗಿದೆ.  ಟ್ರ್ಯಾಕ್ಟರ್ ಬದಲು ಎತ್ತಿನ ಗಾಡಿ ಬಳಸಿ ಕೃಷಿ ಮಾಡುವಂತಾಗಿದೆ.  ಈಗ ತೈಲ ಬೆಲೆ ರೂ. 100 ದಾಟಿದ್ದು, ಮುಂಬರುವ ದಿನಗಳಲ್ಲಿ ಇದು ರೂ. 200 ಅಥವಾ ರೂ. 500 ಆದರೂ ಅಚ್ಚರಿಯಿಲ್ಲ.  ಈಗಲೇ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ ಅಯಬೂಬ ದೇವರಮನಿ, ಯುವ ಮುಖಂಡರಾದ ಕೆಂಚಪ್ಪ ಕತ್ನಳ್ಳಿ, ಲಕ್ಕಪ್ಪ, ಬಗಲಿ, ಜಗದೀಶ ಹಳ್ಳಿಮನಿ, ಮಲ್ಲಿಕಾರ್ಜುನ ಮಾಳೇಗಾಂವ, ಉಮೇಶ ಬೂದಿಹಾಳ, ಶಿವಾನಂದ ಮಲಗೊಂಡ, ಎಂ. ಸಿ. ಮಠ, ರವಿ ಗುಡ್ಡಳ್ಳಿ, ನಾಗಪ್ಪ ಬಿರಾದಾರ, ಸಿದ್ಧರಾಮ ಅಬ್ಬೆಗಾವ, ಕೆಂಚಪ್ಪ ಬಿರಾದಾರ, ಸಿದ್ದಪ್ಪ ಬಿರಾದಾರ, ಆನಂದ ಅರಳಗುಂಡಗಿ, ಶಿವಾನಂದ ಅಂಜುಟಗಿ, ಈರಣ್ಣ ಬಾನಿ ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ

ನಂತರ ಆಲಮೇಲ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಎಲ್ಲ ನಾಯಕರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ.  ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ, ಮಾಜಿ ಸಚಿವರಾದ ಎಂ. ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ಸಿ. ಎಸ್. ನಾಡಗೌಡ ಎಲ್ಲರೂ ಸೇರಿಕೊಂಡು ಒಗ್ಗಟ್ಟಿನಿಂದ ಮತ್ತು ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

 

ಮಾಜಿ ಸಚಿವ ದಿ. ಎಂ. ಸಿ. ಮನಗೂಳಿ ಅವರು ಸಮ್ಮಿಶ್ರ ಸರಕಾರದಲ್ಲಿ ತಮಗೆ ಸಿಕ್ಕ ಅಲ್ಪಾವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.  ಸಿಂದಗಿ ಮತಕ್ಷೇತ್ರದ ಆಲಮೇಲವನ್ನು ತಾಲೂಕು ಕೇಂದ್ರನ್ನಾಗಿ ಮಾಡಿದ್ದಾರೆ.  ಆಲಮೇಲದಲ್ಲಿ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಮಂಜೂರಾತಿ ದೊರಕಿಸಿ ಅದಕ್ಕಾಗಿ ರೂ. 5 ಕೋಟಿ ಮೀಸಲಿಡಿಸಿದ್ದರು.  ಆದರೆ, ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಸರಕಾರ ಬಂದ ಮೇಲೆ ಈ ಕಾಲೇಜು ಆರಂಭ ಪ್ರಕ್ರಿಯೆಗೆ ಹಿನ್ನೆಡೆಯಾಗಿದೆ.  ಇಲ್ಲಿ ಮಂಜೂರಾಗಿದ್ದ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಸಿದ್ಧರಾಮಯ್ಯ ಸರಕಾರದಲ್ಲಿ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಬರಪೀಡಿತ ಜಿಲ್ಲೆ ಎಂದು ಹೆಸರಾಗಿದ್ದ ವಿಜಯಪುರದಲ್ಲಿ ಸಾಕಷ್ಟು ನೀರಾವರಿ ಕೆಲಸಗಳನ್ನು ಮಾಡಿದ್ದಾರೆ.  ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ಮಾಡುವ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದಾರೆ.  ಈ ಹಿಂದೆ ಉಮಾ ಭಾರತಿ ಕೇಂದ್ರ ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಯೋಜನೆ ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಕೂಡ ಈ ಯೋಜನೆ ಮೆಚ್ಚಿ ಶಹಬ್ಬಾಶ ಎಂದು ಹೇಳಿ ದೇಶಾದ್ಯಂತ ಈ ಯೋಜನೆ ಜಾರಿಗೆ ಕ್ರಮ ಕೈಗೊಳ್ಳುತ್ತಿದ್ದಾರೆ.  ವಿಜಯಪುರ ಜಿಲ್ಲೆಯಲ್ಲಿ ಈ ಮುಂಚೆ ಸಾವಿರ ಅಡಿ ಕೊರೆದರೂ ನೀರು ಬಾರದ ಕೊಳವೆ ಭಾವಿಗಳಲ್ಲಿ ಈಗ 100 ರಿಂದ 200 ಅಡಿಗೆ ನೀರು ಸಿಗುತ್ತಿದೆ.  ಅಂತರ್ಜಲ ಹೆಚ್ಚಾಗಿರುವ ಪರಿಣಾಮ ಪ್ರತಿವರ್ಷ ಕೊಳವೆ ಭಾವಿಗಳಿಗಾಗಿ ರೈತರು ಪ್ರತಿವರ್ಷ ಖರ್ಚು ಮಾಡುತ್ತಿದ್ದ ರೂ. 5-6 ಲಕ್ಷ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಸುನೀಲಗೌಡ ಪಾಟೀಲ ಹೇಳಿದರು.

ಮಾಜಿ ಸಚಿವ ದಿ. ಎಂ. ಸಿ. ಮನಗೂಳಿ ನಿಧರಾಗುವುದಕ್ಕಿಂತ 15 ದಿನಗಳ ಮುಂಚೆ ತಮ್ಮ ಮಗ ಎಂ. ಸಿ. ಮನಗೂಳಿ ಅವರನ್ನು ಕಾಂಗ್ರೆಸ್ಸಿಗೆ ಕಳುಹಿಸುವುದಾಗಿ ಹೇಳಿದ್ದರು.  ಈಗ ಅವರ ಮಗ ಅಶೋಕ ಮನಗೂಳಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ.  ಈಗ ಅವರ ಮಗ ಅಶೋಕ ಮನಗೂಳಿ ಅವರನ್ನು ಗೆಲ್ಲಿಸುವ ಮೂಲಕ ದಿ. ಎಂ. ಸಿ. ಮನಗೂಳಿ ಅವರ ಕನಸುಗಳನ್ನು ನನಸು ಮಾಡಬೇಕಾಗಿದೆ ಎಂದು ಸುನೀಲಗೌಡ ಪಾಟೀಲ ಹೇಳಿದರು.

 

Leave a Reply

ಹೊಸ ಪೋಸ್ಟ್‌