ಹುಬ್ಬಳ್ಳಿ: ಆರ್ಥಿಕತೆಯ ಮೇಲೆ ತೈಲ ಬೆಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಬೈ ಎಲೆಕ್ಷನ್ ಬಳಿಕ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಸಭೆ ನಡೆಸಿ ಚರ್ಚಿಸಿ ತೈಲ ಬೆಲೆ ಇಳಿಕೆ ಬಗ್ಗೆ ನಿರ್ಧರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬೈ ಎಲೆಕ್ಷನ್ ಬಳಿಕ ಆರ್ಥಿಕ ಸ್ಥಿತಿಗತಿ ಕುರಿತು ಸಭೆ ನಡೆಸಿ ಪರಿಶೀಲನೆ ಮಾಡುತ್ತೇನೆ. ಆ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಈಗ ಹಾನಗಲ್ ಉಪ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಹಾನಗಲ್ ಮತ್ತು ಸಿಂದಗಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಬಿಜೆಪಿ ಪರವಾದ ವಾತಾವರಣ ಅಲ್ಲಿದೆ. ಅಲ್ಲಿ ಹೆಚ್ಚಿನ ಸಮಯ ಪ್ರಚಾರ ಮಾಡುತ್ತೇನೆ. ಬಿಜೆಪಿ ಭ್ಯರ್ಥಿಗಳು ಅತೀ ಹೆಚ್ಚು ಮತಗಳಿಂದ ಜಯಭೇರಿ ಬಾರಿಸುತ್ತಾರೆ ಎಂದು ಅವರು ತಿಳಿಸಿದರು.
ಸಂಗೂರು ಶುಗರ್ ಫ್ಯಾಕ್ಟರಿಗೆ ತನ್ನದೇ ಇತಿಹಾಸ ಇದೆ. ಅದನ್ನು ಮುಚ್ಚವಲ್ಲಿ ಕಾಂಗ್ರೆಸ್ ಕೊಡುಗೆ ಬಹಳ ಇದೆ. ಬಿಜೆಪಿ ಸರಕಾರ ಬಂದ ಮೇಲೆ ಕಾರ್ಖಾನೆ ಆರಂಭಿಸಿ ಕಬ್ಬು ನುರಿಸುವ ಹಂತಕ್ಕೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.