ಇನ್ನೋಂದು ವರ್ಷದಲ್ಲಿ ಕಾಂಗ್ರೆಸ್ ದಿವಾಳಿಯಾಗಲಿದೆ ಎಂದು ಭವಿಷ್ಯ ನುಡಿದ ಸಚಿವ ಗೋವಿಂದ ಕಾರಜೋಳ

ವಿಜಯಪುರ. ಇನ್ನೊಂದು ವರ್ಷದಲ್ಲಿ ಕಾಂಗ್ರೆಸ್ ದಿವಾಳಿಗಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇಶದಲ್ಲಿ ಕಾಂಗ್ರೆಸ್ 75 ವರ್ಷ ಅಧಿಕಾರವಧಿಯಲ್ಲಿ ದೀನ, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ. ಅವರು ಕಾಂಗ್ರೆಸ್ ಮಾಡಿದ ಅನ್ಯಾಯದ ವಿರುದ್ಧ ಈ ಬಾರಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಬಿಜೆಪಿಗೆ ಮತದಾರರು ಎರಡು ಬಾರಿ ಸ್ಪಷ್ಟ ಬಹುಮತ ನೀಡಿದ್ದಾರೆ. ಇದು ಜನ ಬಿಜೆಪಿ ಪರ ಇರೊದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನಲ್ಲಿ ಪಕ್ಷದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಅವಕಾಶ ತಪ್ಪಿಸಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಕೊಟ್ಟಾಗ, ಭೈರತಿ ಸುರೇಶ ಅವರು ಬಂಡಾಯ ನಿಂತು ಸೋಲಿಸಿದರು. ರೋಷನ್ ಬೇಗ್, ತನ್ವೀರ್ ಸೇಠ್ ಸೇರಿದಂತೆ ಹಲವರನ್ನು ಮೂಲೆಗುಂಪು ಮಾಡಲಾಗಿದೆ. ಅಂಬೇಡ್ಕರ್ ಅವರನ್ನು ಇದೇ ಕಾಂಗ್ರೆಸ್ ನವರು ಸೋಲಿಸಿದರು. ಅಂದಿನ ಪ್ರಧಾನ ಜವಾಹರ್ ಲಾಲ್ ನೆಹರು ಈ ಮೂಲಕ ಅಂಬೇಡ್ಕರ್ ಅವರು ಲೋಕಸಭೆಗೆ ಆಯ್ಕೆಯಾಗದಂತೆ ತಡೆದರು ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ 11 ಬಾರಿ ಗೆದ್ದಿದ್ದರೂ ಅವರನ್ನು ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಮುಖ್ಯಮಂತ್ರಿ ಆಗುತ್ತಾರೆ ಎಂದು ಕುತಂತ್ರದಿಂದ ಕಾಂಗ್ರೆಸ್ ನಾಯಕರೆ ಅವರನ್ನು ಸೋಲಿಸಿದರು. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಮತಬ್ಯಾಂಕ್ ಮಾಡಿಕೊಂಡು ವಂಚಿಸುತ್ತ ಆಡಳಿತ ಮಾಡುವ ಕಾಲ ಮುಗಿದು ಹೋಗಿದೆ. ಇಗ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.

ಏಳು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ “ಸಬ್ ಕಾ ಸಾತ್ ಸಬ್ ಕಾ ವಿಕಾಸ್” ಎಂದು ಹೇಳಿದ್ದರು. ಅದರಂತೆ ಇಂದು ಎಲ್ಲರನ್ನು ಜೊತೆಗೂಡಿಸಿಕೊಂಡು ಮುನ್ನೆಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಹಾನಗಲ್ ನಲ್ಲಿ 20 ಸಾವಿರಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ ಎಂದು ಅವರು ತಿಳಿಸಿದರು.

ಏಳು ವರ್ಷಗಳ ಪ್ರಧಾನಿ ಮೋದಿಯವರ ಸಾಧನೆ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು, ಮತಯಾಚನೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಜಾಫರ್ ಶರೀಫ್ ಮೊಮ್ಮಗ, ತನ್ವೀರ್ ಸೇಠ್, ಇಕ್ಬಾಲ್ ಅಹ್ಮದ್ ಸರಡಗಿ ಸೇರಿದಂತೆ ಇತರ ಅಲ್ಪಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಹತ್ತಿಕ್ಕಿದೆ. ಸಿದ್ದರಾಮಯ್ಯ ಓಟ್ ಬ್ಯಾಂಕ್ ಮಾಡುವುದಕ್ಕೆ ಮಾತ್ರ ಅಹಿಂದ ವರ್ಗವನ್ನು ಬಳಸಿಕೊಂಡಿದ್ದಾರೆ. ಈ ವರ್ಗದ ಜನರನ್ನು ಉಪಯೋಗಿಸಿ, ಮೇಲೆ ಬಂದ ಬಳಿಕ ಏಣಿ ಒದೆಯುವ ಕೆಲಸ ಮಾಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.

ಈ ಸಂದರ್ಭದಲ್ಲಿ ಸಚಿವ ವಿ. ಸೋಮಣ್ಣ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌