ಭೂಕಂಪ ಅನುಭವಿಸುತ್ತಿರುವ ಗ್ರಾಮಗಳಲ್ಲಿ ಬಯಲು ಪ್ರದೇಶಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ

ವಿಜಯಪುರ: ವಿಜಯಪುರ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಪದೇ ಪದೇ ಭೂಕಂಪನದ ಅನುಭವ ಉಂಟಾಗುತ್ತಿದೆ.  ಈ ಗ್ರಾಮಗಳಲ್ಲಿ ಸುರಕ್ಷತೆ ಇರುವ ಬಯಲು ಪ್ರದೇಶಗಳನ್ನು ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಲೋಕೋಪಯೋಗಿ, ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಇಲಾಖೆ ಮತ್ತು ತಹಶೀಲ್ದಾರರ ಅವರಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆ ನಡೆಸಿದ ಅವರು, ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ಭೂಕಂಪದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.  ಜಿಲ್ಲೆಯಲ್ಲಿ ಈವರೆಗೆ 2 ರಿಂದ 3 ತೀವ್ರತೆಯ ಭೂಕಂಪ ಉಂಟಾಗಿದೆ.  ಇದರ ತೀವ್ರತೆ ಕಡಿಮೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

ಆರೋಗ್ಯ, ಹೆಸ್ಕಾಂ ಮತ್ತು ಅಗ್ನಿಶಾಮಕ ಇಲಾಖೆಗಳು ಭೂಕಂಪನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳಬೇಕು.  ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರಗಳನ್ನು ಜಾಗೃತಗೊಳಿಸಬೇಕು.  ತಹಶೀಲ್ದಾರು, ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತಿ, ಪೊಲೀಸ್, ಗಣಿ ಮತ್ತು ಭೂಗರ್ಭ ಇಲಾಖೆ, ಅಗ್ನಿಶಾಮಕ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ತಂಡವು ಭೂಕಂಪ ಸಂಭವಿಸಿದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಗ್ರಾ. ಪಂ. ಟಾಸ್ಕ್ ಫೋರ್ಸ್ ಸಭೆ ನಡೆಸಬೇಕು ಎಂದು ಅವರು ಸೂಚನೆ ನೀಡಿದರು.

ಈ ಸಭೆಗಳಲ್ಲಿ ಜನರಿಗೆ ತಿಳುವಳಿಕೆ ನೀಡಿ ಆತ್ಮ ಧೈರ್ಯವನ್ನು ಬೆಳೆಸಬೇಕು.  ಈ ನಿಟ್ಟಿನಲ್ಲಿ ಸ್ವಯಂ ಸೇವಕರು ಮತ್ತು ಸ್ಥಳೀಯ ಸಂಘ-ಸAಸ್ಥೆಗಳ ನೆರವನ್ನು ಪಡೆಯಬೇಕು.  ಭೂಕಂಪ ಪೂರ್ವದಲ್ಲಿ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳು, ಭೂಕಂಪದ ನಂತರ ಕೈಕೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ತಿಳುವಳಿಕೆ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಲಿರುವುದರಿಂದ ಈ ಕುರಿತು ಅಧ್ಯಯನವನ್ನು ಕೈಕೊಳ್ಳಲು ಮತ್ತು ಜನರಿಗೆ ತಿಳುವಳಿಕೆಯನ್ನು ನೀಡಲು ಹೈದರಾಬಾದ್‌ನ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟ್ಯೂಟ್‌ದಿಂದ ಮೂರು ಜನ ವಿಜ್ಞಾನಿಗಳನ್ನೊಳಗೊಂಡ ತಂಡವು ಅ. 18 ರಂದು ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ಕೈಗೊಳ್ಳಲಿದೆ.  ಆ ಸಮಯದಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಹಾಜರಿದ್ದು ವಿಜ್ಞಾನಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದು ಅವರು ಹೇಳಿದರು.

ಈ ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌