ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 25 ಸಾವಿರ ಅಂತರದಿಂದ ಗೆಲುವು ಸಾಧಿಸಲಿದ್ದಾರೆ- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರು ಕನಿಷ್ಟ ಸುಮಾರು 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮುಜರಾಯಿ. ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಸಿಂದಗಿ ಮತಕ್ಷೇತ್ರದ ಉಪ ಚುನಾವಣೆಯನ್ನು ವ್ಯವಸ್ಥಿತವಾಗಿ ಎದುರಿಸುತ್ತಿದ್ದೇವೆ.  ದೇವಣಗಾಂವ ಮತ್ತು ಕನ್ನೋಳ್ಳಿ ಎರಡೂ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಚಾರದ ಜವಾಬ್ದಾರಿಯನ್ನು ನನಗೆ ವಹಿಸಲಾಗಿದೆ.  ಎಲ್ಲ ಸಚಿವರು ಪ್ರತ್ಯೇಕ ಜಿಲ್ಲಾ ಪಂಚಾಯಿತಿಗಳಲ್ಲಿ ಪ್ರಚಾರ ಮಾಡುತ್ತಿದ್ದೇವೆ.  ಅಲ್ಲದೇ, ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ವಿಧಾನ ಪರಿಷತ ಸದಸ್ಯ ಅರುಣ ಶಹಾಪುರ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಸೇರಿಕೊಂಡು ಪ್ರಚಾರ ನಡೆಸುತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರು ಈ ಹಿಂದೆ ಶಾಸಕರಾಗಿದ್ದಾಗ ಸಿಂದಗಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.  ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ.  ಈ ಬಾರಿ ಬೈ ಎಲೆಕ್ಷನ್ ನಲ್ಲಿ ರಮೇಶ ಭೂಸನೂರ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿ ಗ್ರಾಮದಲ್ಲಿ ಪ್ರಚಾರದ ಸಂದರ್ಭದಲ್ಲಿ ನಾವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ.  ಈ ಚುನಾವಣೆಯಲ್ಲಿ ರಮೇಶ ಭೂಸನೂರು ಅವರು ಗೆಲುವು ಸಾಧಿಸಿದ ನಂತರ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ನಾನು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೆತ್ತಿಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.

ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವೆಯಾದ ಮೇಲೆ ಈ ಹಿಂದೆ ನೀಡಿದ ಭರವಸೆಯಂತೆ ಸಿಂದಗಿ ತಾಲೂಕಿನ ತಾರಾಪುರ ಮತ್ತು ಬ್ಯಾಡಗಿಹಾಳ ಗ್ರಾಮಗಳ ನಿರಾಶ್ರಿತರಿಗೆ ನೀಡಿದ ಭರವಸೆಯಂತೆ ಎರಡೂ ಊರುಗಳ 358 ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಿ ಹಕ್ಕುಪತ್ರ ವಿತರಣೆ ಮಾಡಿದ್ದೇನೆ.  ಅಲ್ಲದೇ, ಆ ಗ್ರಾಮಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕೊರೊನಾ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗಿತ್ತು.  ಆಗ ಜಿಲ್ಲೆಯ ಸಿಂದಗಿ, ಇಂಡಿ,  ಮುದ್ದೆಬಿಹಾಳ, ಬಸವನ ಬಾಗೆವಾಡಿ ಸೇರಿದಂತೆ ಒಂಭತ್ತು ಕಡೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲಾಗಿದೆ.  ವಿಜಯಪುರ ಜಿಲ್ಲೆಯಲ್ಲಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಿತ್ತು.  ಮೊದಲನೇ ಹಂತದ ಕಾರ್ಯ ಮುಕ್ತಾಯವಾದ ನಂತರ ಸ್ಥಗಿತಗೊಂಡಿತ್ತು.  ನಾನು ಜಿಲ್ಲಾ ಉಸ್ತುವಾರಿ ಸಚಿವೆಯಾದ ನಂತರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುವ ಕಾರ್ಯ ಮಾಡಿದ್ದೇನೆ ಎಂದು ಸಚಿವರು ತಿಳಿಸಿದರು.

ಸಿಂದಗಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಎರಡು ಬಾರಿ ಶಾಸಕರಾಗಿ 10 ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯ ಜನರು ಮಾತನಾಡುತ್ತಿದ್ದಾರೆ.  ಅಲ್ಲದೇ, ಈ ಬಾರಿ ಅವರನ್ನೇ ಆಯ್ಕೆ ಮಾಡುವ ಭರವಸೆ ನೀಡಿದ್ದಾರೆ.  ರಾಜ್ಯ ಸರಕಾರ ಸಿಂದಗಿ ಕ್ಷೇತ್ರಕ್ಕೆ ಮಾಡಿದ ಕಾರ್ಯಗಳು ಹಾಗೂ ನಾನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾದ ಮೇಲೆ ಕೊರೊನಾ ಎರಡು ಅಲೆಯ ಸಂದರ್ಭದಲ್ಲಿ ಈ ಭಾಗದಲ್ಲಿ ತೊಂದರೆಗೆ ಒಳಗಾದ ಜನರಿಗೆ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.

ಎರಡು ಬಾರಿ ಈ ಭಾಗದಲ್ಲಿ ಪ್ರವಾಹ ಎದುರಿಸಿದ್ದೇವೆ.  ನಾನು ಪ್ರವಾಹ ಪೀಡಿತ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ.  ಪ್ರವಾಹದಿಂದ ರಸ್ತೆ, ಮನೆ, ತಡೆಗೋಡೆ ಹಾಳಾಗಿರುವುದನ್ನು ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ.  2019 ರಲ್ಲಿ  ಸಿಂದಗಿ ತಾಲೂಕಿನಲ್ಲಿ ಹೆಸರು, ಶೇಂಗಾ, ಸೂರ್ಯಕಾಂತಿ, ಕಬ್ಬು ಸೇರಿ 2256 ಹೆಕ್ಟೇರ್ ಭೂಮಿ ಮುಳುಗಡೆಯಾಗಿ ಬೆಳೆ ನಾಶವಾಗಿತ್ತು.  ಬೆಳೆ ಹಾನಿಗೊಳಗಾದ ರೈತರ ಖಾತೆಗಳಿಗೆ ರೂ. 345. 32 ಕೋ. ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

2020 ರಲ್ಲಿಯೂ 20952.68 ಹೆಕ್ಟೇರ್ ಪ್ರದೇಶದಲ್ಲಿ ಸಿಂದಗಿ ಕ್ಷೇತ್ರದಲ್ಲಿ ಬೆಳೆ ಹಾನಿಯಾಗಿದೆ.  ಬೆಳೆ ನಾಶದ ಸಮೀಕ್ಷೆ ಮಾಡಲಾಗಿದ್ದು, ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡುವ ಕಾರ್ಯ ನಡೆಯುತ್ತಿದೆ.  ಸತತ ಮಳೆಯಿಂದಾಗಿ 166 ಮನೆಗಳು ಹಾನಿಗೊಳಗಾಗಿದ್ದು, ಪೂರ್ಣ ಪ್ರಮಾಣದ 10 ಮನೆಗಳ ನಿರ್ಮಾಣಕ್ಕೆ ತಲಾರೂ. 10 ಲಕ್ಷ ಪರಿಹಾರ ಹಾಗೂ ದುರಸ್ಥಿಗೊಂಡಿರುವ  ಬಿ ದರ್ಜೆಯ ಮನೆಗಳಿಗೆ ರೂ. 3 ಲಕ್ಷ ಹಾಗೂ ಸಿ ದರ್ಜೆಯ ಮನೆಗಳಿಗೆ ರೂ. 50 ಸಾವಿರ ಪರಿಹಾರ ನೀಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರು ಅವರ ಪತ್ನಿ ಲಲಿತಾ ಭೂಸನೂರು, ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿಲ್ಪಾ ಕುದರಗೊಂಡ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಶಶಿಕಲಾ ಜೊಲ್ಲೆ ಸಿಂದಗಿ ಮತಕ್ಷೇತ್ರದ ದೇವಣಗಾಂವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

Leave a Reply

ಹೊಸ ಪೋಸ್ಟ್‌