ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ- ಈ ಬಾರಿ ಮನೆಯಿಂದ ಹೊರಗೋಡಿ ಬಂದ ಜನತೆ- ಎಲ್ಲಿ ಗೊತ್ತಾ?

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಮುಂದುವರೆದಿದೆ.  ಕಳೆದ ಹಲವು ದಿನಗಳಿಂದ ಜಿಲ್ಲೆಯ ಆಲ್ಲಲ್ಲಿ ಭಾರಿ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವವಾಗುತ್ತಿದ್ದು, ಜನತೆ ಭಯ ಬೀಳುವಂತಾಗಿದೆ.

ಸಂ. 6.34ರ ಸುಮಾರಿಗೆ ತಿಕೋಟಾ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.  ಈ ತಿಂಗಳಲ್ಲಿ ಈ ಭಾಗದಲ್ಲಿ ಎರಡನೇ ಬಾರಿ ಭೂಮಿ ಕಂಪಿಸಿದೆ.  ತಿಕೋಟಾ ತಾಲೂಕಿನ ಕಳ್ಳಕವಟಗಿ, ಘೋಣಸiಗಿ, ಬಾಬಾನಗರ, ಬಿಜ್ಜರಗಿ, ಹುಬನೂರ, ಸಿದ್ದಾಪುರ ಕೆ., ಟಕ್ಕಳಕಿ, ಸೋಮದೇವರಹಟ್ಟಿ ಮತ್ತು ಮಲಕನದೇವರಹಟ್ಟಿ ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜೋರಾದ ಶಬ್ದ ಕೇಳಿ ಬಂದಿದ್ದು, 5 ರಿಂದ 10 ಸೆಕೆಂಡ್ ವರೆಗೆ ಭೂಮಿ ಕಂಪಿಸಿದ ಅನುಭವವಾಯಿತು.  ಮನೆಯ ಮೇಲ್ಚಾವಣಿಯಲ್ಲಿನ ಮಣ್ಣು ಉದುರಿತು.  ಮನೆಯಲ್ಲಿದ್ದ ಹಿರಿಯರು ಮತ್ತು ಮಕ್ಕಳೊಂದಿಗೆ ಭಯಗೊಂಡು ಹೊರಗೆ ಓಡಿ ಬಂದಿರುವುದಾಗಿ ಕಳ್ಳಕವಟಗಿ ಗ್ರಾಮಸ್ಥ ಕುಮಾರ ಗಳತಗಿ ಮತ್ತು ಅಣ್ಣಾರಾಯ ಅವರು ಮಾಹಿತಿ ನೀಡಿದ್ದಾರೆ.

ಇದೇ ತಿಂಗಳು ಕೆಲವು ದಿನಗಳ ಹಿಂದೆ ಇದೇ ರೀತಿ ಈ ಭಾಗದಲ್ಲಿ ಭೂಕಂಪ ಉಂಟಾಗಿತ್ತು.  ಅದು ರಿಕ್ಚರ್ ಮಾಪಕದಲ್ಲಿಯೂ ದಾಖಲಾಗಿತ್ತು.  ಆಗ ಬಿಜ್ಜರಗಿ ಗ್ರಾಮದ ಬಳಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿತ್ತು.  ಆ ಸಮಯದಲ್ಲಿ ಯಾವ ಅಧಿಕಾರಿಯಾಗಲಿ, ಗಣಿ ಮತ್ತು ಭೂ ವಿಜ್ಞಾನಿಗಳಾಗಲಿ ಈ ಗ್ರಾಮಗಳಿಗೆ ಭೇಟಿ ನೀಡಿರಲಿಲ್ಲ.

ಈಗ ಮತ್ತೆ ಭೂಮಿ ಕಂಪಿಸಿದೆ.  ಪದೇ ಪದೇ ಭೂಮಿ ಕಂಪಿಸುತ್ತಿರುವುದರಿಂದ ಈ ಭಾಗದಲ್ಲಿ ಜನತೆ ಆತಂಕಗೊಂಡಿದ್ದಾರೆ.  ಈ ಹಿಂದೆ ಎರಡ್ಮೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಇದೇ ರೀತಿಯ ಶಬ್ದದೊಂದಿಗೆ ವಾರದಲ್ಲಿ ಮೂರ್ನಾಲ್ಕು ಬಾರಿ ಭೂಕಂಪನ ಆಗುತ್ತಿತ್ತು.  ಆದರೆ ಆಗ ರಿಕ್ಟರ್ ಮಾಪಕದಲ್ಲಿ ದಾಖಲಾಗಿರಲಿಲ್ಲ.  ಆಗ ಗಣಿ ಹಾಗೂ ಭೂ ವಿಜ್ಞಾನಿಗಳು ಆ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಇದು ಭೂಕಂಪವಲ್ಲ.  ಇದೊಂದು ಭೂಮಿಯಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆ ಎಂಬ ಮಾಹಿತಿ ನೀಡಿದ್ದರು.

ಆದರೆ, ಇದೇ ತಿಂಗಳು ಕೆಲವು ದಿನಗಳ ಹಿಂದೆ ಭೂಕಂಪ ದಾಖಲಾಗಿದೆ.  ಈಗ ಎರಡನೆಯ ಬಾರಿ ಭೂಕಂಪ ಉಂಟಾಗಿದೆ.   ಇದು ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವ ಕುರಿತು ವಿಜಯಪುರ ಜಿಲ್ಲಾಡಳಿತ ಇನ್ನೂ ಸ್ಪಷ್ಟಪಡಿಸಬೇಕಾಗಿದೆ.

 

Leave a Reply

ಹೊಸ ಪೋಸ್ಟ್‌