ಕಾಂಗ್ರೆಸ್ ಪಾಲಿಗೆ ಅಚ್ಛೇ ದಿನ್ ಬರುವುದೇ ಇಲ್ಲ- ಕಾಂಗ್ರೆಸ್ ಭಾಗ್ಯ ಯಾರ ಮನೆ ಬಾಗಿಲಿಗೂ ಬರಲಿಲ್ಲ- ಸಿಎಂ‌ ಬಸವರಾಜ ಬೊಮ್ಮಾಯಿ

ವಿಜಯಪುರ:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಅಚ್ಛೆದಿನ್ ಬರುವುದೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟಂತಹ ಭಾಗ್ಯ ಯಾರ ಮನೆ ಬಾಗಿಲಿಗೂ ತಲುಪಲಿಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಪಾಲಿಗೆ ದೌರ್ಭಾಗ್ಯ ವಾಯಿತು. ಅದಕ್ಕಾಗಿಯೇ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಕಳಿದ ಚುನಾವಣೆಯಲ್ಲಿ ತಿರಸ್ಕರಿಸಿದರು ಎಂದು ಅವರು ಲೇವಡಿ ಮಾಡಿದರು.

ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಅಲಮೇಲ್ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಅವರು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.


ಮೋದಿ ಅವರನ್ನು ಟೀಕಿಸುವುದರಿಂದ ದೊಡ್ಡವರಾಗುತ್ತೇವೆ ಎಂದರೆ ಅದು ಭ್ರಮೆ. ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಅಚ್ಛೆದಿನಗಳು ಬರುವುದಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿಗಳು ಕೆಲ ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ  ಗೆಲುವು ಸಾಧಿಸಲಾಗಲಿಲ್ಲ . ಇದೇ ಕಾರಣದಿಂದ ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ದುರಾಡಳಿತ ಆರಂಭವಾಯಿತು.  ಕರ್ನಾಟಕದ ಜಾಣ ಮತದಾರರು ಇವರಿಗೆ 80 ಸೀಟು ನೀಡಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಮಾಡಿದರು ಎಂದರು.


ಕಾಂಗ್ರೆಸ್ ಅಭಿವೃದ್ಧಿಗಾಗಿ ರಾಜಕಾರಣ ಮಾಡುವುದಿಲ್ಲ.  ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತದೆ. ಯಾವ ಚುನಾವಣೆಯಲ್ಲಿ ಜೆಡಿಎಸ್ ನವರನ್ನು ಹಗುರವಾಗಿ ಕಂಡಿದ್ದರೋ ಅವರ ಜೊತೆಗೆ ಸೇರಿ ಅಪವಿತ್ರವಾದ ಮೈತ್ರಿ ಸರಕಾರವನ್ನು ನಡೆಸಿದರು. ಜನತಾದಳ ಕಾಂಗ್ರೆಸ್ ಮನೆಬಾಗಿಲಿಗೆ ಹೋಗಿರಲಿಲ್ಲ. ಅಧಿಕಾರದ ಆಸೆಗೆ ಕಾಂಗ್ರೆಸ್ನವರು ಜನತಾದಳದವರ ಮನೆಬಾಗಿಲ ಎದುರು ನಿಂತು ಅಪವಿತ್ರವಾದ ಮೈತ್ರಿ ಸರ್ಕಾರ ರಚನೆ ಮಾಡಿದರು ಎಂದು ಬೊಮ್ಮಾಯಿ ಟೀಕಿಸಿದರು.

ಅಸಂಖ್ಯಾತ ಹೋರಾಟಗಾರರ ತ್ಯಾಗ ಕಾಂಗ್ರೆಸ್ ನವರಿಗೆ ನೆನಪಿಲ್ಲ. ಸ್ವತಂತ್ರ ಹೋರಾಟದಲ್ಲಿ ಪ್ರಾಣವನ್ನು ತ್ಯಾಗ ಮಾಡಿದ ಲಕ್ಷಾಂತರ ಜನ ಕಾಂಗ್ರೆಸ್ಸಿರು ಅವರಿಗೆ ನೆನಪಿಗೆ ಬರುವುದಿಲ್ಲ. ಗಾಂಧಿ ಕುಟುಂಬದ ಕೆಲವೇ ಕೆಲವು ಜನರು  ದೇಶಕ್ಕಾಗಿ, ಸ್ವತಂತ್ರಕ್ಕಾಗಿ ಹೋರಾಡಿದ್ದಾರೆ ಎಂದು ಬಿಂಬಿಸುತ್ತಾರೆ ಎಂದು ಆರೋಪಿಸಿದರು.

ನಮ್ಮ ಜೊತೆ ಇದ್ದಾಗ ಸಿದ್ದರಾಮಯ್ಯ ಚೆನ್ನಾಗಿದ್ದರು

ಸಿದ್ದರಾಮಯ್ಯನವರು ನಮ್ಮ ಜೊತೆಗಿದ್ದಾಗ ಚೆನ್ನಾಗಿದ್ದರು ಕಾಂಗ್ರೆಸ್ಸಿಗೆ ಸೇರಿ ಕೆಟ್ಟು ಹೋದರು. ಸಂಗತಿ ದೋಷದಿಂದ ಸಿದ್ದರಾಮಯ್ಯನವರು ಸಂಪೂರ್ಣವಾಗಿ ಕೆಟ್ಟು ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಂದಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಲೇವಡಿ ಮಾಡಿದರು.

ರಮೇಶ ಭೂಸನೂರ ಅವಧಿಯಲ್ಲಿ ಸಿಂಧಗಿ ಅಭಿವೃದ್ಧಿ

ಸಿಂದಗಿ ಮತಕ್ಷೇತ್ರ ಅಭಿವೃದ್ಧಿಯಾಗಿದ್ದು ರಮೇಶ ಭೂಸನೂರ ಅವರ ಅವಧಿಯಲ್ಲಿ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು ಗುತ್ತಿ ಬಸವಣ್ಣ ಯೋಜನೆ ಮೂಲಕ ಜನರಿಗೆ ನೀರು ಕೊಡಬೇಕು, 90 ಕಿಲೋಮೀಟರ್ ನಿಂದ 150 ಕಿಲೋಮೀಟರ್ ವರೆಗೆ ವಿಸ್ತರಣೆ ಮಾಡಿ ಜನರ ಕಷ್ಟ ನೀಗಿಸಬೇಕೆಂದು ಶ್ರಮಿಸಿದವರು.  ಈ ಯೋಜನೆ ಜಾರಿಯಾಗುವ ಹಿಂದಿನ ದೊಡ್ಡ ಶಕ್ತಿಯೆಂದರೆ ರಮೇಶ್ ಬೂಸನೂರ್  ಎಂದು ಅವರ ಕೆಲಸವನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು. ಬಿಜೆಪಿ ಸರಕಾರದ ಅವಧಿಯಲ್ಲಿ ಚಿಮ್ಮಲಗಿ ಏತ ನೀರಾವರಿ ಮುಳವಾಡ ಏತ ನೀರಾವರಿ ಕಾರ್ಯರೂಪಕ್ಕೆ ಬಂದಿದೆ ಆದರೆ ಕಾಂಗ್ರೆಸ್ ಅವಧಿಯಲ್ಲಿ ಈ ಭಾಗದ ಯೋಜನೆಗಳನ್ನು ನಿರ್ಲಕ್ಷ ಮಾಡಲಾಗಿತ್ತು. ಮುಳವಾಡ ಏತ ನೀರಾವರಿಯನ್ನು 2012ರಲ್ಲಿ ಬೆಳಿಗ್ಗೆ ಐದು ಗಂಟೆಗೆ ಹೋಗಿ ಮೂರನೇ ಹಂತದ ಕಾಮಗಾರಿಯ ಭೂಮಿಪೂಜೆಯನ್ನು ಮಾಡಿದ್ದೇವೆ. ಬಿಜೆಪಿ ಸರ್ಕಾರದ ಅಭಿವೃದ್ಧಿಪರ ಬದ್ಧತೆಯನ್ನು ಇದು ಎತ್ತಿತೋರಿಸುತ್ತದೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರದಲ್ಲಿ ಜಾರಿಯಾದ ಯೋಜನೆಗಳನ್ನು ನಾವೇ ಪ್ರಾರಂಭಿಸುವ ಸದಾವಕಾಶ ಬಂದಿದೆ. ಸಿಂಧಗಿಯಲ್ಲಿ ರಮೇಶ್ ಭೂಸನೂರ್ ಜಯಭೇರಿ ಬಾರಿಸಿ ಗುತ್ತಿ ಬಸವಣ್ಣ ಏತ ನೀರಾವರಿ ನೀರನ್ನು ಹರಿಸುವ ಕೆಲಸ ಮಾಡುತ್ತಾರೆ ಎಂದು ಗೆಲುವಿನ ವಿಶ್ವಾಸವನ್ನು ಬೊಮ್ಮಾಯಿ ವ್ಯಕ್ತಪಡಿಸಿದರು.

ಕೋರವಾರ ಬ್ರಾಂಚ್ ಗೆ 378 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ಸಿಂದಗಿ ತಾಲೂಕಿನ ಕೊನ್ನೂರು ಗ್ರಾಮದ 6 ಸಾವಿರ ಎಕರೆ ಇದರಿಂಡ ನೀರಾವರಿಯಾಗಿ ಪರಿವರ್ತನೆ ಆಗಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆ ಆರಂಭವಾಗಿದ್ದು ವಿಜಾಪುರದಿಂದ ಎಲ್ಲೆಡೆ ಕೆರೆ ತುಂಬಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಕಾಂಗ್ರೆಸ್ ನವರು ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇವರ ಮಾತುಗಳಿಂದ ಮೋದಿಯವರು ಸಣ್ಣವರಾಗುವುದಿಲ್ಲ, ಕಾಂಗ್ರೆಸ್ ನವರಲ್ಲಿನ ಸಣ್ಣತನ ಎಷ್ಟಿದೆಯೆಂದು ಅವರೇ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಿ ಅಂತ ಅಂದೇ ಮಹಾತ್ಮ ಗಾಂಧಿಯವರು ಹೇಳಿದ್ದರು ಆದರೆ ಅಧಿಕಾರದ ಆಸೆಗೆ ಅವರು ಹೇಳಿದಂತೆ ಕಾಂಗ್ರೆಸ್ ನಡೆದುಕೊಳ್ಳಲಿಲ್ಲ. ಆದರೆ ಭಾರತದ ಜನ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ದೇಶದಿಂದ ವಿಸರ್ಜನೆ ಮಾಡಿ ಮಾಡುತ್ತಾರೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಈ ದೇಶದ ಪ್ರಧಾನಿಯಾಗಿ ಜನ ಆಯ್ಕೆ ಮಾಡುತ್ತಾರೆ ಎಂದು ಅವರು ಹೇಳಿದರು.

10 ಕೋಟಿ ರೈತ ಕುಟುಂಬಗಳಿಗೆ ಕಿಸಾನ್ ಸನ್ಮಾನ ಯೋಜನೆ ಮೂಲಕ ರೂ. 6 ಸಾವಿರ ಕೇಂದ್ರದಿಂದ ರೂ. 4  ರಾಜ್ಯ ಸರ್ಕಾರದಿಂದ ರೈತರಿಗೆ ನೀಡಲಾಗುತ್ತಿದೆ.
8 ಕೋಟಿ ತಾಯಂದಿರಿಗೆ ಸಿಲೆಂಡರ್ ನೀಡಲಾಗಿದೆ.
ಆಯುಷ್ಮಾನ್ ಭಾರತ ಯೋಜನೆಯ ಮೂಲಕ 1 ಲಕ್ಷ್ಯ 93 ಕೋಟಿ ಜನರಿಗೆ ಸೌಲಭ್ಯ ಒದಗಿಸಲಾಗಿದೆ
ನರೇಂದ್ರ ಮೋದಿ ಅವರ ದಿಟ್ಟತನದಿಂದ ಕೋವಿಡ್ ಸಮರ್ಥವಾಗಿ ಎದುರಿಸಲಾಗದೆ. ರಾಜ್ಯದಲ್ಲಿ ಶೇಕಡ 83ರಷ್ಟು ಮೊದಲ ಹಂತದ ಲಸಿಕೆ ನೀಡಲಾಗಿದೆ. ಎರಡನೇ ಹಂತದಲ್ಲಿ 34ರಷ್ಟು ಲಸಿಕೆ ರಾಜ್ಯದಲ್ಲಿ ನೀಡಲಾಗಿದೆ
ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ನೀಡುವ ಉದ್ದೇಶದಿಂದ ದೇಶದಲ್ಲಿಯೇ ಮೊದಲ ಬಾರಿಗೆ ವಿಶೇಷವಾದ ಯೋಜನೆಯನ್ನು ಕರ್ನಾಟಕದಲ್ಲಿ ರೂಪಿಸಲಾಗಿದೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1000 ಕೋಟಿ ಮೀಸಲಿಡಲಾಗಿದೆ

ಎಲ್ಲ ಸಮುದಾಯಗಳು ಅಭಿವೃದ್ಧಿಯಾದಾಗ ನಾಡು ಅಭಿವೃದ್ಧಿಯಾಗುತ್ತದೆ ಯಾವುದಾದರೂ ಒಂದು ಸಮುದಾಯ ಹಿಂದೆ ಉಳಿದರು ಅಭಿವೃದ್ಧಿಯಾಗುವುದಿಲ್ಲ ಅದಕ್ಕಾಗಿ ವಿಶೇಷವಾಗಿ ಎಸ್ಸಿಎಸ್ಟಿ ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತಹ ಕಾರ್ಯಕ್ರಮಗಳನ್ನು ಮುಂಬರುವ ದಿನದಲ್ಲಿ ರೂಪಿಸುತ್ತೇವೆ ಎಂದು ಅವರು ನುಡಿದರು. ಕನ್ನಡಿಗರಿಗೆ ಉದ್ಯೋಗ ಕೊಡುವಂತಹ ಉದ್ಯೋಗ ನೀತಿಯನ್ನು ತರುತ್ತಿದ್ದೇವೆ. ಸಾಮಾಜಿಕ ಸಾಮರಸ್ಯ ಸಾಮಾಜಿಕ ಸಮಾನತೆ ಎಲ್ಲರಿಗೂ ಸಿಗಬೇಕು ಕಾನೂನು ಚೌಕಟ್ಟಿನಲ್ಲಿ ನ್ಯಾಯ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸಮಾಡುತ್ತೇವೆ ಎಂದು ಅವರು ಹೇಳಿದರು.

Leave a Reply

ಹೊಸ ಪೋಸ್ಟ್‌