ವಿಜಯಪುರ: ಕಾಂಗ್ರೆಸ್ ಪ್ರಚಾರಕ್ಕೆ ತೆರಳುತ್ತಿದ್ದ ತೆರೆದ ವಾಹನವನ್ನು ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ವಿಜಯಪುರ ಜಿಲ್ಲೆಯ ಕನ್ನೊಳ್ಳಿ ಬಳಿ ನಡೆದಿದೆ.
ಸಿಂದಗಿ ಮತಕ್ಷೇತ್ರ ವ್ಯಾಪ್ತಿಯ ಕನ್ನೊಳ್ಳಿ ಚುನಾವಣೆ ಚೆಕ್ ಪೋಸ್ಟ್ ನಲ್ಲಿ ಚುನಾವಣೆ ಅಧಿಕಾರಿಗಳು ಕಾಂಗ್ರೆಸ್ ಪ್ರಚಾರದ ತೆರೆದ ವಾಹನ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ ಈ ತೆರೆದ ವಾಹನ ಸಿಂದಗಿಗೆ ಪ್ರಚಾರಕ್ಕೆ ಹೊರಟಿತ್ತು. ಇದೇ ವಾಹನದಲ್ಲಿ ಸ್ವಲ್ಪ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕರು ಭರ್ಜರಿ ಪ್ರಚಾರ ನಡಸಬೇಕಿದೆ. ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ಡಿಕೆ ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲಾ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಈ ವಾಹನದಲ್ಲಿ ರೋಡ್ ಶೋ ನಡೆಸಲು ಈ ವಾಹನ ತರಿಸಲಾಗಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ ಗಾಂಧಿ, ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ, ಎಸ್. ಆರ್. ಪಾಟೀಲ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಭಾವಚಿತ್ರವನ್ನು ಈ ತೆರೆದ ವಾಹನ ಹೊಂದಿದೆ.
ಚುನಾವಣೆ ಪ್ರಚಾರದಲ್ಲಿ ಬಳಸಲು ಈ ವಾಹನಕ್ಕೆ ಸ್ಟಿಕ್ಕರ್, ಮೈಕಸೆಟ್ ಅಳವಡಿಕೆ ಹಾಗೂ ಪ್ರಚಾರದ ಅನುಮತಿ ಪಡೆಯದ ಕಾರಣ ಇದನ್ನು ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾಧಿಕಾರಿ ಅಥವಾ ಚುನಾವಣೆ ಅಧಿಕಾರಿಗಳಿಂದ ಅನುಮತಿ ಪತ್ರ ತರುವ ವರೆಗೂ ವಾಹನ ತಡೆಹಿಡಿದರುವ ವಾಹನವನ್ನು ಅಧಿಕಾರಿಗಳು ಹಾಗೂ ಪೊಲೀಸರು ಬಿಡದಿರಲು ನಿರ್ಧರಿಸಿದ್ದಾರೆ.