ಯಡಿಯೂರಪ್ಪ ಎಂದೂ ಮುಂಬಾಗಿಲಿನಿಂದ ಬಂದು ಮುಖ್ಯಮಂತ್ರಿ ಆಗಲೇ ಇಲ್ಲ- ಮಾಜಿ ಸಿಎಂ ಎಸ್.ಸಿದ್ಧರಾಮಯ್ಯ ವಾಗ್ದಾಳಿ

ವಿಜಯಪುರ: ಯಡಿಯೂರಪ್ಪ ಎಂದೂ ಮುಂಬಾಗಿಲಿನಿಂದ ಬಂದು ಮುಖ್ಯಮಂತ್ರಿ ಆಗಲೇ ಇಲ್ಲ.  ಕೋಟಿಗಟ್ಟಲೇ ಹಣ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿಯಾಗಿ ಎರಡೇ ವರ್ಷಗಳಲ್ಲಿ ಅವರನ್ನು ಬಿಜೆಪಿಯ ಹೈಕಮಾಂಡ ಕಿತ್ತು ಹಾಕಿದರು.  ಕಣ್ಣೀರು ಹಾಕಿಕೊಂಡು ಯಡಿಯೂರಪ್ಪ ರಾಜೀನಾಮೆ ಕೊಟ್ಟರು ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಅವರು, ಸಿಂದಗಿ ತಾಲೂಕಿನ ಮೊರಟಗಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಯಡಿಯೂರಪ್ಪ ಅವರಂಥ ಕೆಟ್ಟ ಸರಕಾರ ಕರ್ನಾಟಕದ ಇತಿಹಾಸದಲ್ಲಿ ಎಂದೂ ಬಂದಿಲ್ಲ.  ರಾಜ್ಯದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ಮಾಡಿದರು.  ಅಪ್ಪ- ಮಗ ಸೇರಿ ರಾಜ್ಯವನ್ನೇ ಲೂಟಿ ಮಾಡಿದರು.  ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು.  ಬಸವರಾಜ ಬೊಮ್ಮಾಯಿ ಆರ್ ಎಸ್ ಎಸ್ ನಿಂದ ನೇಮಕವಾದ ಗಿರಾಕಿ.  ಬಸವರಾಜ್ ಬೊಮ್ಮಾಯಿ ಸೇರಿದಂತೆ ಇವರೆಲ್ಲ ಲೂಟಿ ಹೊಡೆದ ಗಿರಾಕಿಗಳು ಎಂದು ಅವರು ವಾಗ್ದಾಳಿ ನಡೆಸಿದರು.

ನೀರಾವರಿಗಾಗಿ ಹೋರಾಟ ಮಾಡಿದ ವ್ಯಕ್ತಿ ದಿವಂಗತ ಎಂ ಸಿ ಮನಗೂಳಿ. ಅದಕ್ಕಾಗಿ ಈ ಭಾಗದ ಜನ ಅವರಿಗೆ ಸ್ಮರಿಸುತ್ತಾರೆ.  ಜಾತಿ, ದುಡ್ಡಿನ ಮೇಲೆ ಮತ ಹಾಕಿದರೆ ಈ ದೇಶ ರಾಜ್ಯ ಉಳಿಯುವದಿಲ್ಲ.  ರೂ. 2.46 ಲಕ್ಷ ಕೋ. ರಾಜ್ಯದ ಬಜೆಟ್.  ಈ ಮೂರುವರೆ ವರ್ಷದಲ್ಲಿ ಒಂದು ಹೊಸ ಮನೆ ಕೊಡಕಾಗಲಿಲ್ಲ.  ನಾನು ಸಿಎಂ ಆಗಿರುವಾಗ ಮನೆಗಳನ್ನು ಕಟ್ಟಲು ಕೊಟ್ಟ ಮನೆಗಳ ಬಿಲ್ ಅರ್ದಕ್ಕೆ ನಿಂತಿದೆ.  ಇವರೆಲ್ಲ ದುಡ್ಡು ಹೊಡೆಯುವ ಗಿರಾಕಿಗಳು, ಜನರ ಕಷ್ಟಕ್ಕೆ ಇವರು ಸ್ಪಂದಿಸುವವರಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಅಚ್ಚೇ ದಿನ ಆಯೇಂಗಾ ಎಂದು ಕೊಂಡೇ ಪೆಟ್ರೋಲ, ಡೀಸೆಲ್, ಗ್ಯಾಸ್ ಬೆಲೆ ಏರಿಸುತ್ತಿದ್ದಾರೆ.  ಇದಾ ಅಚ್ಚೇದಿನ್? ನರೆಂದ್ರ ಮೋದಿ ಅವರು ಈ ದೇಶವನ್ನು ಸಂಪೂರ್ಣ ಹಾಳು ಮಾಡಲು ಹೊರಟಿದ್ದಾರೆ.  ಇವರ ಆಡಳಿತದಲ್ಲಿ ಯುವಕರು ಉದ್ಯೋಗ ಕಳೆದುಕೊಂಡರು.  ಈ ದೇಶ ಉಳಿಯಬೇಕು ಎಂದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾದ್ಯ.  2023 ರಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಕರ್ನಾಟಕದಲ್ಲಿ ಬದುಕಿದ್ದೆ ನರೇಂದ್ರ ಮೋದಿ ಹೆಸರು ಹೇಳಿಕೊಂಡು.  ಇಂದು ನಮ್ಮ ರಾಜ್ಯದ ತೆರಿಗೆಯನ್ನೇ ಕೇಂದ್ರದವರು ನಮಗೆ ಕೊಡುತ್ತಿಲ್ಲ.  ನರೇಂದ್ರ ಮೋದಿ ಕಂಡರೇನು ಇವರು ಗಡಗಡ ನಡುಗುತ್ತಾರೆ  ರಾಜ್ಯದಲ್ಲಿ 25 ಜನ ಎಂ ಪಿ ಗಳಿದ್ದಾರೆ ಇಷ್ಟು ಅನುದಾನ ಬೇಕು ಎಂದು ಒಮ್ಮೆಯಾದರೂ ಕೇಳಿದ್ದಾರಾ? ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದರೆ ಅಶೋಕ ಮನಗೂಳಿಗೆ ಮತಹಾಕಬೇಕು ಎಂದು ಸಿದ್ಧರಾಮಯ್ಯ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ, ಶಾಸಕರಾದ ಎಂ. ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಅಜಯಸಿಂಗ್, ಮಾಜಿ ಶಾಸಕ ಎಚ್. ಸಿ. ಮಹಾದೇವಪ್ಪ, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

 

 

Leave a Reply

ಹೊಸ ಪೋಸ್ಟ್‌