ಭೀಮಾ ತೀರದ ಮಹಿಳಾ ಮತದಾರರ ಓಲೈಕೆಯತ್ತ ಸಚಿವೆ ಶಶಿಕಲಾ ಜೊಲ್ಲೆ ಚಿತ್ತ- ಪ್ರತಿ ಮನೆಯ ಮುಂದೆ ಕಮಲದ ರಂಗೋಲಿ ಹಾಕಲು ಸಚಿವೆ ಮನವಿ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಪ್ರಚಾರ ಚುರುಕು ಪಡೆದುಕೊಂಡಿದ್ದು, ಭೀಮಾ ತೀರದ ಮಹಿಳಾ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಸಚಿವೆ ಶಶಿಕಲಾ ಚಿತ್ತ ಹರಿಸಿದ್ದಾರೆ.

ಸಿಂದಗಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಭೀಮಾ ತೀರದ ದೇವರ ನಾವಡಗಿ, ಕಮಸಗಿ, ಕಡ್ಲೆವಾಡ, ಶಂಬೇವಾಡ, ದೇವಣಗಾಂವ, ಬಮ್ಕನಹಳ್ಳಿ ಹಾಗೂ ಗುಂದಗಿ ಗ್ರಾಮಗಳಲ್ಲಿ ಮನೆ.ಮನೆಗೂ ತೆರಳಿ ಮಹಿಳೆಯರನ್ನು ಭೇಟಿ ಮಾಡಿ ಅವರು, ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರು ಪರ ಮತ ಹಾಕುವಂತೆ ಮನವಿ ಮಾಡಿದರು.

ಈ ಸಂದರ್ಭಫದಲ್ಲಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿ ಪರ ಅಲೆಯಿದೆ.  ಮಹಿಳೆಯರು ಪ್ರತಿ ಮನೆಯ ಮುಂದೆ ಬಿಜೆಪಿ ಪಕ್ಷದ ಚಿನ್ಹೆ ಕಮಲದ ರಂಗೋಲಿ ಬಿಡಿಸುವುದು ಹಾಗೂ ಪ್ರತಿಯೊಬ್ಬ ಮಹಿಳೆಯರ ಕೈ ಮೇಲೆ ಮದರಂಗಿ ಹಚ್ಚುವಂತೆ ಸಲಹೆ ನೀಡಿದರು.

ದೇವರ ನಾವಡಗಿಯಲ್ಲಿ ಮಾತನಾಡಿದ ಸಚಿವರು, ಈ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಲವಂತ ವಾಸುದೇವ ಫಡ್ಕೆ ಅವರು ನೆಲೆಸಿದ್ದರು.  ಅವರನ್ನು ಬ್ರಿಟೀಷರು ಬಂಧಿಸಿದರು. ಅಂಥ ಪುಣ್ಯ ಪುರುಷರು ನೆಲೆಸಿದ ಗ್ರಾಮ ಇದು. ಈ ಗ್ರಾಮಕ್ಕೆ ಐತಿಹಾಸಿಕ ಇತಿಹಾಸ ಇದೆ ಎಂದು ಹೇಳಿದರು.

ಕುಮಸಗಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದಲ್ಲಿ ಕೊರೊನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬದಲು ಬೇರೆ ಯಾರಾದರೂ ಪ್ರಧಾನಿಯಾಗಿದ್ದರೆ ದೇಶದ ಶೇ. 50 ರಷ್ಟು ಜನರು ಪ್ರಾಣ ಕಳೆದುಕೊಳ್ಳುವಂತಾಗುತ್ತಿತ್ತು. ನಮಗೆ ದೈವೀ ಪುರುಷರು ಪ್ರಧಾನಿಯಾಗಿ ಸಿಕ್ಕಿದ್ದಾರೆ ಎಂದು ಹೇಳಿದರು.

 

ಕೊರೊನಾ ರೋಗದ ಬಗ್ಗೆ ನಮಗಾರಿಗೂ ಅರಿವಿರಲಿಲ್ಲ. ಚೀನಾ ಮೂಲದಿಂದ ಕೊರೊನಾ ಯಾವಾಗ ಬರಬೇಕು ಎಂದು ನಿರ್ಲಕ್ಷ್ಯ ಮಾಡಿದ್ದರು.  ಆದರೆ. ಕೊರೊನಾದಿಂದ ದೇಶದ ಜನರು ಸಾಕಷ್ಟು ತೊಂದರೆಗೆ ಒಳಗಾದರು.  ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಿದ್ದರಿಂದ ಎಲ್ಲ ರೀತಿಯ ಮೂಲ ಸೌಕರ್ಯ. ಅಗತ್ಯ ಆರೋಗ್ಯ ಸೇವೆ ಒದಗಿಸುವ ಕೆಲಸ ಮಾಡಿದ್ದಾರೆ.  ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ನಾನೂ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ, ಆಕ್ಸಿಜನ್ ಘಟಕ ಸ್ಥಾಪನೆ ಮಾಡುವ ಕೆಲಸ ಮಾಡಿದ್ದೇನೆ.  ಸಿಂದಗಿ ಕ್ಷೇತ್ರದಲ್ಲಿ ನಿರಂತರ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಿದ್ದೇನೆ.  ಭೀಮಾ ಏತ ನೀರಾವರಿ ಯೋಜನೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ತಾರಾಪುರ ಮತ್ತು ಬ್ಯಾಡಗಿಹಾಳ ಗ್ರಾಮದ 358 ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಪುನರ್ವಸತಿ ಕಲ್ಪಿಸುವ ಕೆಲಸ ಮಾಡಿದ್ದೇನೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

ನಂತರ ಶಂಬೆವಾಡ, ಕಡ್ಲೇವಾಡಗಳಲ್ಲಿ ಪ್ರಚಾರ ನಡೆಸಿದ ಅವರು, ದೇಶದ ಜನಸಂಖ್ಯೆಯ ಶೇ 50 ರಷ್ಟು ಮಹಿಳಾ ಮತದಾರರಿದ್ದೇವೆ. ನಾವು ಮನೆಯಲ್ಲಿ ತಂದೆ ಹೇಳಿದಾಗ ಮದುವೆಯಾದ ಮೇಲೆ ಗಂಡ ಹೇಳಿದ ಅಭ್ಯರ್ಥಿಗೆ ಮತ ಹಾಕಿಕೊಂಡು ಬಂದಿದ್ದೇವೆ.  ಆದರೆ, ನಾವು ಏಕೆ ಮತ ಹಾಕುತ್ತಿದ್ದೇವೆ ಎಂದು ಯೋಚನೆ ಮಾಡಬೇಕು.  ಇಷ್ಟು ವರ್ಷದಿಂದ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದವು.  ಅವರು ಜನರ ಅಭಿವೃದ್ಧಿಗೆ ಏನೂ ಮಾಡಲಿಲ್ಲ.  ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ.  ಈಗ ನಮ್ಮ ಸರಕಾರಗಳು ಹಳ್ಳಿಗಳ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದೇವೆ.  ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾತಂತ್ರ್ಯೋತ್ಸವದ 75 ವರ್ಷದ ಹಿನ್ನೆಲೆಯಲ್ಲಿ ಅಮೃತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು

ನಂತರ ರಮೇಶ ಭೂಸನೂರ ಅವರ ಸ್ವಗ್ರಾಮ ದೇವಣಗಾಂವದಲ್ಲಿ ಪ್ರಚಾರ ನಡೆಸಿದ ಅವರು, ದೇವಣಗಾಂವದ ಜನತೆ ರಮೇಶ ಬೂಸನೂರು ಅವರಿಗೆ ಮಂಡಲ ಪಂಚಾಯಿತಿಯಿಂದ ಚುನಾವಣೆಯಲ್ಲಿ ಆಯ್ಕೆ ಮಾಡುತ್ತ ಬಂದಿದ್ದೀರಿ.  ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ರಮೇಶ ಭೂಸನೂರು ಅವರನ್ನು ಎರಡು ಬಾರಿ ವಿಧಾನ ಸಭೆಗೆ ಆಯ್ಕೆ ಮಾಡುವ ಮೂಲಕ ದೇವಣಗಾಂವ ಗ್ರಾಮ ಕರ್ನಾಟಕದ ಭೂಪುಟದಲ್ಲಿ ಎದ್ದು ಕಾಣುವಂತೆ ಮಾಡಿದ್ದೀರಿ ಎಂದು ಹೇಳಿದರು.

ಮಹಿಳೆಯರು ಕಮಲ ಚಿಹ್ನೆಗೆ ಮತ ಹಾಕುವಂತೆ ಎಲ್ಲರೂ ಮನವೊಲಿಸುವ ಪ್ರಯತ್ನ ಮಾಡಬೇಕು.  ಮಹಿಳಾ ಕಾರ್ಯಕರ್ತರು ಅಡುಗೆ ಮನೆವರೆಗೂ ತೆರಳಿ ಮಹಿಳಾ ಮತದಾರರ ಮನವೊಲಿಸಿ ಬಿಜೆಪಿಗೆ ಮತ ಹಾಕುವಂತೆ ಮಾಡಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಸೋಮನಗೌಡ ಪಾಟೀಲ, ಶಾಸಕ ರಮೇಶ ಭೂಸನೂರು ಅವರ ಪತ್ನಿ ಲಲಿತಾ ಬೂಸನೂರು ಹಾಗೂ ಸ್ಥಳೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌