ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಉಂಟಾಗಿದೆ. ಬೆಳಿಗ್ಗೆ ಭಾರಿ ಶಬ್ದದೊಂದಿಗೆ ಉಂಟಾದ ಈ ಭೂಕಂಪನದಿಂದ ನಾನಾ ಗ್ರಾಮಸ್ಥರು ತೀವ್ರ ಆಂತಕಗೊಂಡಿದ್ದಾರೆ.
ಸೋಮವಾರ ಸಂಜೆಯಷ್ಟೇ ಭೂಕಂಪನ ಉಂಟಾಗಿದ್ದ ತಿಕೋಟಾ ತಾಲೂಕಿನ ನಾನಾ ಗ್ರಾಮಗಳಲ್ಲಿ ಈಗ ಮತ್ತೆ ಭೂಮಿ ಕಂಪಿಸಿದೆ. ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ್ದರಿಂದ ಜನರು ಹೊರಗೆ ಓಡಿ ಬಂದಿದ್ದಾರೆ. ಈ ಹಿಂದೆಯೂ ಹಲವಾರು ಬಾರಿ ಈ ಭಾಗದಲ್ಲಿ ಭೂಕಂಪನ ಅನುಭವಕ್ಕೆ ಬಂದಿದ್ದರೂ ಬೆಳಿಗ್ಗೆ 10.29ರ ಸುಮಾರಿಗೆ ಕೇಳಿ ಬಂದ ಭಾರಿ ಶಬ್ದ ಈ ಹಿಂದೆಂದಿಗಿಂತಲೂ ಹೆಚ್ಚಾಗಿತ್ತು. ಅಲ್ಲದೇ, ಭೂಮಿಯೂ ಭಾರಿ ಪ್ರಮಾಣದಲ್ಲಿ ನಡುಗಿತು ಎಂದು ಕಳ್ಳಕವಟಗಿ ಗ್ರಾಮದ ಶಿಕ್ಷಕ ಪರಮೇಶ್ವರ ಗದ್ಯಾಳ ಬಸವ ನಾಡಿನ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಬಾರಿ ಭೂಕಂಪದ ಕೇಂದ್ರ ಬಿಂದು ಧನರ್ಗಿ(ದಂಧರಗಿ) ಗ್ರಾಮದಿಂದ ಆಗ್ನೆಯ ದಿಕ್ಕಿನಲ್ಲಿ 2.9 ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.