ಸೋಮಣ್ಣಗೆ ಬೆಂಗಳೂರು ಉಸ್ತುವಾರಿ ಕೊಡಿ- ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಕೊಡಿ ಇಲ್ಲಾಂದ್ರೆ…-ಯತ್ನಾಳ

ವಿಜಯಪುರ: ವಿಜಯಪುರಕ್ಕೆ ಮಂತ್ರಿ ಸ್ಥಾನ ಕೊಡದೆ ಅನ್ಯಾಯ ಮಾಡಿದ್ದೀರಿ. ಮುಂದಿನ ಬಾರಿ ಮಂತ್ರಿ‌ ಕೊಡಲಿಲ್ಲ ಅಂದ್ರೆ ಮತ್ತೆ ಬೇರೆ ಆಗುತ್ತದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಚಿವ ವಿ. ಸೋಮಣ್ಣ ಅವರಿಗೆ ಬೆಂಗಳೂರಿ ಉಸ್ತುವಾರಿ ಕೊಡಬೇಕು.  ಅವರು ಸಮರ್ಥರಿದ್ದಾರಿದ್ದಾರೆ.  ಅವರ ಬದಲು ನಿಮ್ಮ ಸುತ್ತಮುತ್ತ ತಿರುಗಾಡುವವರಿಗೆ ಕೊಡಬೇಡಿ.  ಅವರು ಈಗಾಗಲೇ ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.  ಪಕ್ಷದ ಪರ ಇರುವವರಿಗೆ ಅವಕಾಶ ಕೊಡಿ.  ನಾವು ವಿಜಯಪುರ ಜಿಲ್ಲೆಯಲ್ಲಿ 8 ರಲ್ಲಿ 7 ಸ್ಥಾನಗಳನ್ನು ಗೆದ್ದು ತೋರಿಸುವ ಶಕ್ತಿ ನಮ್ಮಲ್ಲಿದೆ ಎಂದು ಯತ್ನಾಳ ಹೇಳಿದರು.

ನಾನಾ ಸಮುದಾಯಗಳು ಮೀಸಲಾತಿಗಾಗಿ ಬೇಡಿಕೆ ಇಟ್ಟಿವೆ. ಈ ಬೇಡಿಕೆಯನ್ನು ಸಿಎಂ ಈಡೇರಿಸಬೇಕು. ಬಿಜೆಪಿ ಯಾವುದೇ ಜಾತಿಗೆ ಸೀಮಿತ ಇಲ್ಲ. ಹಾಲುಮತ, ಕೋಳಿ, ಮಡಿವಾಳ, ವಾಲ್ಮೀಕಿ ಸಮಾಜದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೇನೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ, ಕೆ ಪಿ ಸಿ ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅರೆಹುಚ್ಚರು ಎಂದು ಯತ್ನಾಳ್ ಲೇವಡಿ ಮಾಡಿದರು.

ಕಾಂಗ್ರೆಸ್ ನವರು ಕೇವಲ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆಯೇ ಶಂಖ ಹೊಡೆಯುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಜನತೆಗೆ ಗೊತ್ತಿದೆ. ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಅರೆ ಹುಚ್ಚರು. ರಾಹುಲ್ ಗಾಂಧಿ ಅಪೀಮ್ ಸೇವನೆ ಮಾಡಿಕೊಂಡು ಅಡ್ಡಾಡುತ್ತಾರೆ. ಅವರ ಕೈಯಲ್ಲಿ ದೇಶ ಕೊಟ್ಟರೆ ಗತಿ ಏನು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ನಾಟಕ ಕಂಪನಿ ಇನ್ನು ನಡೆಯಲ್ಲ. ಕುಮಾರಸ್ವಾಮಿ ಲೆಕ್ಕಕ್ಕಿಲ್ಲ ಎಂದು ಯತ್ನಾಳ್ ಲೇವಡಿ ಮಾಡಿದರು.

ಗದ್ದಾರಿ ಕೆಲಸ ಮಾಡುವುದು ನಮ್ಮ ರಕ್ತದಲ್ಲಿ ಬಂದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಗೆದ್ದು ತೋರಿಸುತ್ತೇವೆ ಎಂದು ಯತ್ನಾಳ ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ವಿ. ಸೋಮಣ್ಣ, ಶಶಿಕಲಾ ಜೊಲ್ಲೆ, ಸಿ. ಸಿ. ಪಾಟೀಲ, ಹಾಲಪ್ಪ ಆಚಾರ, ಪ್ರಭು ಚೌಹಾಣ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಎ. ಎಸ್. ಪಾಟೀಲ ನಡಹಳ್ಳಿ, ಸಿದ್ದು ಸವದಿ, ಅರುಣ ಶಹಾಪೂರ, ಹಣಮಂತ ನಿರಾಣಿ, ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೋಡ, ಶರಣು ಸಲಗರ,
ಸಿಂದಗಿ ಬೈ ಎಲೆಕ್ಷನ್ ಅಭ್ಯರ್ಥಿ ರಮೇಶ ಭೂಸನೂರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಸಚಿವ ಶ್ರೀಕಾಂತ ಕುಲಕರ್ಣಿ, ಬಿಜೆಪಿ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮುಖಂಡರಾದ ಕೆ. ಶಿವರಾಂ, ಶ್ರೀಶೈಲ ಜೋಗೂರ, ಶಿವರುದ್ರ ಬಾಗಲಕೋಟ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌