ಲಘು ಭೂಕಂಪನದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ- ಹೈದರಾಬಾದ ಭೂವಿಜ್ಞಾನ ತಜ್ಞರ ಹೇಳಿಕೆ

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಅಲ್ಲಲ್ಲಿ ಭೂಮಿ ಕಂಪಿಸಿದ ಹಾಗೂ ಭೂಮಿಯೊಳಗಿನಿಂದ ಶಬ್ಧ ಕೇಳಿದ ನಂತರ ಲಘು ಭೂಕಂಪನದ ಅನುಭವವಾಗುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದಿನ ಗಣಿ ಮತ್ತು ಭೂವಿಜ್ಞಾನಿಗಳ ತಂಡ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಹಿರಿಯ ಭೂವಿಜ್ಞಾನಿ ಶಶಿಧರ್ ಡಿ. ನೇತೃತ್ವದ ತಜ್ಞರ ತಂಡ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮಕ್ಕೆ ಆಗಮಿಸಿದ ಈ ತಂಡ ಮಸೂತಿ ಬಳಿ ಸಿಸ್ಮೋಮೀಟರ್(ಭೂಕಂಪನ ಮಾಪನ ಯಂತ್ರ) ಅಳವಡಿಸಿತು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಈ ಭಾಗದಲ್ಲಿ ಎರಡು ಸಲ ಭೂಮಿ ಕಂಪಿಸಿದ ಹಾಗೂ ಭೂಮಿಯೊಳಗಿಂದ ಶಬ್ಧ ಕೇಳಿ ಬಂದಿದ್ದು, ಲಘು ಭೂಕಂಪನದ ಅನುಭವವಾಗಿದೆ.  ಈ ಹಿನ್ನೆಲೆಯಲ್ಲಿ ಇಲ್ಲಿ ಸೈಸ್ಮೋಮೀಟರ್ ಅಳವಡಿಸಲಾಗಿದೆ.  ಇನ್ನು ಮುಂದೆ ಇದರಲ್ಲಿ ಭೂ ಕಂಪನದ ಅತೀ ಸೂಕ್ಷ್ಮ ಮಾಹಿತಿ ಸೇರಿದಂತೆ ಪ್ರತಿ ಮಾಹಿತಿಯೂ ದಾಖಲಾಗಲಿದೆ.  ಇದನ್ನು ಹೈದರಾಬಾದಿನಿಂದ ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದರು.

ದಾಖಲಾಗುವ ಯಾವುದೇ ಭೂಕಂಪನದ ಮಾಹಿತಿಯನ್ನು ಕೂಡಲೇ ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಲಾಗುವುದು.  ಅದನ್ನು ಸರಕಾರದ ಗಮನಕ್ಕೂ ತರಲಾಗುವುದು.  ಈ ಸಿಸ್ಮೋಮೀಟರ್ ಯಂತ್ರ ಅಳವಡಿಸಿದ ಸುಮಾರು ಒಂದು ತಿಂಗಳೊಳಗೆ ಭೂಕಂಪನದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಲಿದ್ದು, ಆ ಬಗ್ಗೆ ಹೆಚ್ಚಿನ ಅಧ್ಯಯನ, ಸಂಶೋಧನೆ ನಡೆಸಲಾಗುತ್ತದೆ.  ಆದ್ದರಿಂದ ಜನರು ಇಂಥ ಲಘು ಭೂಕಂಪನದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

ಈಗಾಗಲೇ ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲೂ ಸಂಭವಿಸಿರುವ ಲಘು ಭೂಕಂಪನದಿಂದಾಗಿ ಆ ಭಾಗಗಳ ಜನರು ಬಹಳ ಆತಂಕ ಹಾಗೂ ಭಯದಿಂದ ಬದುಕುತ್ತಿದ್ದಾರೆ.  ಆದರೆ ಇದೊಂದು ಲಘು ಭೂಕಂಪನವಷ್ಟೇ.  ಪ್ರಕೃತಿ ಸಹಜ ಕ್ರಿಯೆಗಳಲ್ಲೊಂದು.  ಇದಕ್ಕೆ ನಿರ್ದಿಷ್ಟ ಕಾರಣವನ್ನೂ ಈಗಲೇ ಹೇಳಲು ಸಾಧ್ಯವಿಲ್ಲ.  ಆದರೆ, ಮಳೆಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿರುವುದೇ ಪ್ರಮುಖ ಕಾರಣವಾಗಿರಬಹುದು ಎಂದು ಅವರು ಹೇಳಿದರು.

ಹೀಗೆ ಭೂಮಿ ಕಂಪಿಸಿದ ಹಾಗೂ ಭೂಮಿಯೊಳಗಿನಿಂದ ಶಬ್ಧ ಕೇಳಿಬರುತ್ತಿರುವುದು ಲಘು ಭೂಕಂಪನದ ಲಕ್ಷಣಗಳಾಗಿದ್ದು, ಇದರಿಂದ ಆಸ್ತಿ-ಪಾಸ್ತಿ ಹಾಗೂ ಜೀವ ಹಾನಿ ಆಗುವ ಸಂಭವ ಬಹಳ ಕಡಿಮೆಯಿದೆ.  ಮುಂದಿನ ದಿನಗಳಲ್ಲಿ ಇದರ ಪ್ರಮಾಣ ತಗ್ಗಬಹುದು.  ಇದು ನಿಲ್ಲಲೂಬಹುದು.  ಆದ್ದರಿಂದ ಜನರು ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಈ ಭಾಗದಲ್ಲಿ ಭೂಕಂಪನದ ತೀವ್ರತೆ ಬಹಳ ಕಡಿಮೆಯೇ ಇದೆ.  ಮಳೆ ವಾಡಿಕೆಗಿಂತ ಜಾಸ್ತಿಯಾಗಿ ಭೂಮಿಯೊಳಗಿನ ಶಿಲಾಪದರಗಳಲ್ಲಿ ಬಿರುಕು ಉಂಟಾಗಿ ಈ ರೀತಿಯ ನೈಸರ್ಗಿಕ ಪ್ರಕ್ರಿಯೆ ನಡೆಯುತ್ತಿರಬಹುದು.  ಇದರಿಂದ ಯಾವುದೇ ದೊಡ್ಡ ಪ್ರಮಾಣದ ಆಸ್ತಿ ಹಾಗೂ ಜೀವ ಹಾನಿಯಾಗುವುದಿಲ್ಲ.  ಜನರೂ ಕೂಡ ಸ್ವಲ್ಪ ಜಾಗೃತರಾಗಿರಬೇಕು ಎಂದು ಹಿರಿಯ ಭೂವಿಜ್ಞಾನಿ ಶಶಿಧರ ಡಿ. ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲೆಯಲ್ಲಿ ಈಗಾಗಲೇ ವಿಪತ್ತು ನಿರ್ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಅಲ್ಲಲ್ಲಿ ಅಳವಡಿಸಲಾಗಿರುವ ರಿಕ್ಟರ್ ಮಾಪಕದಲ್ಲಿ ಭೂಕಂಪನದ ಬಗ್ಗೆ ಮಾಹಿತಿ ದಾಖಲಾಗುತ್ತಿದೆ.  ಆದರೂ ಈ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಹೈದ್ರಾಬಾದ್‍ನಿಂದ ವಿಶೇಷ ಪರಿಣಿತಿವುಳ್ಳ ಭೂ ವಿಜ್ಞಾನಿಗಳು ಹಾಗೂ ತಜ್ಞರನ್ನೊಳಗೊಂಡ ತಂಡವನ್ನು ಜಿಲ್ಲೆಗೆ ಕರೆಸಲಾಗಿದೆ.  ಅಲ್ಲದೇ, ಮಸೂತಿ ಗ್ರಾಮದಲ್ಲಿಯೂ ಒಂದು ಸೈಸ್ಮೋಮೀಟರ್ ಅಳವಡಿಸಲಾಗಿದೆ.  ಇದರಲ್ಲಿ ಭೂಕಂಪನದ ಪ್ರತಿ ಮಾಹಿತಿಯೂ ದಾಖಲಾಗುತ್ತದೆ.  ಆದ್ದರಿಂದ ಜನರು ಅನಗತ್ಯವಾಗಿ ಭಯ ಆತಂಕ ಪಡುವ ಅಗತ್ಯವಿಲ್ಲ.  ಜನರ ಹಿತಕಾಯಲು ಜಿಲ್ಲಾಡಳಿತ ಬದ್ಧವಾಗಿದೆ.  ಈ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಮುಂದೆಯೂ ಜಿಲ್ಲಾಡಳಿತ ಹಾಗೂ ಸರಕಾರದಿಂದ ಇನ್ನಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲಾಡಳಿತ ಜನರೊಂದಿಗಿದೆ.  ಹಗಲು ರಾತ್ರಿಯೆನ್ನದೇ ಶ್ರಮಿಸುತ್ತದೆ.  ಹಾಗೆಯೇ ಸುಶಿಕ್ಷಿತರು, ಪ್ರಜ್ಞಾವಂತರು ಈ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡಿ ಅವರಿಗೆ ಸರಿಯಾದ ತಿಳುವಳಿಕೆ ನೀಡಬೇಕು ಎಂದು ಹೇಳಿದರು.

ಇದೇ ವೇಳೆ ಇಲ್ಲಿನ ಕೆಲವು ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಭೂ ವಿಜ್ಞಾನಿಗಳ ಎದುರು ಇತ್ತೀಚಿನ ಕೆಲವು ದಿನಗಳಿಂದ ಹಗಲು, ರಾತ್ರಿ.ಮತ್ತು  ಮಧ್ಯಾಹ್ನ ಭೂಮಿ ಕಂಪಿಸಿದ ಹಾಗೂ ಭೂಮಿಯೊಳಗಿನಿಂದ ಶಬ್ಧ ಕೇಳಿಬರುತ್ತಿರುವ ಅನುಭವವಾಗುತ್ತಿದೆ.  ಆದರೆ ಇದರಿಂದ ಯಾವುದೇ ಹಾನಿಗಳಾಗಿಲ್ಲ.  ಆದರೂ ಜನರು ಭಯದಲ್ಲಿದ್ದಾರೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಹೈದರಾಬಾದಿನ ನ್ಯಾಶನಲ್ ಜಿಯೋಫಿಜಿಕಲ್ ರಿಸರ್ಚ್ ಇನ್ಸಟ್ಯೂಟ್‍ನ ರಮೇಶ ದಿಕ್ಪಾಲ್, ಡಾ. ಸುರೇಶ ಬುಡಪಟ್ಟಿ, ಬೆಂಗಳೂರಿನ ಅಭಿನಯ ಬಿನೆ, ಪುಷ್ಪಾ.ಟಿ. ವಿ. ಸುಭಾಶ್ಚಂದ್ರ ಎಸ್., ಮಹೇಶ ಬಿರಜನವರ ಸೇರಿದಂತೆ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾಧಿಕಾರಿ ರಾಕೇಶ ಜೈನಾಪೂರ, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

 

Leave a Reply

ಹೊಸ ಪೋಸ್ಟ್‌