ವಿಜಯಪುರ: ಬೈ ಎಲೆಕ್ಷನ್ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನಾಗಲಿ ಪ್ರಧಾನಿ ನರೇಂದ್ರ ಮೋದಿಯಾಗಲಿ ಅಲ್ಪಸಂಖ್ಯಾತರಿಗೆ ಎಂದೂ ಅನ್ಯಾಯ ಮಾಡಿಲ್ಲ. ಎಲ್ಲ ಜನರ ಪರ ಯೋಜನೆ ಜಾರಿ ಮಾಡಿದ್ದೇವೆ ತಿಳಿಸಿದರು
ಇಂದು ವಿಜಯಪುರದ ಸಿಂದಗಿ ಮತಕ್ಷೇತ್ರದಲ್ಲಿ ಪ್ರಚಾರ ಮುಗಿಸಿ ಶುಕ್ರವಾರದಿಂದ ಹಾನಗಲ್ ನಲ್ಲಿ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ಮೋದಿಜೀ ಮತ್ತು ಬೊಮ್ಮಾಯಿ ಮಾಡಿರುವ ಕೆಲಸವನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಹೀಗಾಗಿ ಈ ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಅವರು ತಿಳಿಸುದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತಾಡಿದರೆ ಅವರ ಗೌರವ ಕಡಿಮೆ ಆಗುತ್ತೆ ಹೊರತು ಸಂಘದ ಗೌರವ ಕಡಿಮೆ ಆಗೋದಿಲ್ಲ. ಈ ದೇಶದ ರಾಷ್ಟ್ರಪತಿ, ಪ್ರಧಾನಿ, ನಾವು ಆರ್ ಎಸ್ ಎಸ್ ಮೂಲಕವೇ ಬಂದಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ 26 ರಾಜ್ಯಗಳಲ್ಲಿನ ಬಹುತೇಕ ಮುಖಂಡರು ಆರ್ ಎಸ್ ಎಸ್ ನಿಂದ ಬಂದವರಾಗಿದ್ದಾರೆ. ಆರ್ ಎಸ್ ಎಸ್ ಬಗ್ಗೆ ಪ್ರಶ್ನೆ ಕೇಳುವ ಹಕ್ಕು ಕುಮಾರಸ್ವಾಮಿಗೆ ಇಲ್ಲ. ಈ ರೀತಿ ಪ್ರಶ್ನೆ ಕೇಳುವ ಅಗತ್ಯತೆಯೂ ಇಲ್ಲ. ಅವರಿಗೆ ಉತ್ತರ ಕೊಡುವ ಅಗತ್ಯತೆಯೂ ಇಲ್ಲ ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದರು.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಇದರಲ್ಲಿ ಸತ್ಯಾಂಶ ಇಲ್ಲ. ಕಾಂಗ್ರೆಸ್ ಅವರು ಮಾತಾಡಬಹುದು. ಸ್ವತಃ ದೇವೇಗೌಡರೇ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಾನು ಒಪ್ಪುವುದಿಲ್ಲ. ಯಾವ ಪಕ್ಷದ ಬಗ್ಗೆಯೂ ಯಾರೂ ಹಗುರವಾಗಿ ಮಾತಾಡಬಾರದು ಎಂದು ಹೇಳಿದರು.
ನಮ್ಮ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಬೇಕು. ಮೂರು ಪಕ್ಷದವರು ಪ್ರಚಾರದ ಮೂಲಕ ಆ ಕೆಲಸ ಮಾಡುತ್ತಿದ್ದಾರೆ. ಅಂತಿಮವಾಗಿ ಮತದಾರರು ತೀರ್ಮಾನ ಮಾಡುತ್ತಾರೆ. ಇಂದು ಮತದಾರರು ಬಿಜೆಪಿ ಕಡೆಗೆ ಒಲವು ಇರುವುದರಿಂದ ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಿಂದಗಿಯಲ್ಲಿ ನಿರೀಕ್ಷೆಗೂ ಮೀರಿ ಸಾರ್ವಜನಿಕರು ಮೆರವಣಿಗೆಯಲ್ಲಿ, ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಿಂದೇಂದು ಕಾಣದಂಥ ಜನ ಬೆಂಬಲ ಕಾಣಿಸುತ್ತಿದೆ. ಮತದಾರರು ಭಾರತೀಯ ಜನತಾ ಪಕ್ಷದ ಪರವಾಗಿ ಇದ್ದಾರೆ ಎಂದು ಅವರು ಹೇಳಿದರು.
ನನ್ನ ರಾಜಕೀಯ ಜೀವನದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡುವ ಕೆಲಸ ಮಾಡಿಲ್ಲ. ನಾವು ಅಥವಾ ಪ್ರಧಾನಿ ಮೋದಿಯವರು ಹಿಂದುಗಳಿಗೆ ಕೊಟ್ಟು ಅಲ್ಪ ಸಂಖ್ಯಾತರ ಕೊಡದೇ ಇರುವ ಯಾವುದಾದರೂ ಒಂದು ಕಾರ್ಯಕ್ರಮ ತೋರಿಸಿ. ಪ್ರಧಾನಿ ಮೋದಿಯವರಾಗಲಿ, ನಾವಾಗಲಿ ಎಲ್ಲ ಕಾಲದಲ್ಲೂ ಎಲ್ಲ ಯೋಜನೆಗಳನ್ನು ಹಿಂದು ಮುಸ್ಲಿಂ ಕ್ರೈಸ್ತರೆಂದು ಭೇದಭಾವ ಮಾಡದೇ ಕೊಟ್ಟಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.
ಅನ್ನ ಭಾಗ್ಯದ ಅಕ್ಕಿ ಕೊಟ್ಟಿದ್ದು ಕೇಂದ್ರ ಸರಕಾರ. ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ಕೊಟ್ಟ ಯೋಜನೆ ಇದಲ್ಲ. ಭಾಗಲಕ್ಷ್ಮೀ ಯೋಜನೆ, ಕಿಸಾನ ಸಮ್ಮಾನ ಯೋಜನೆ ಯೋಜನೆಯ ಸೇರಿದಂತೆ ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ. ಈ ಕಾರ್ಯಕ್ರಮದ ಫಲವಾಗಿಯೇ ಇಂದು ದೇಶದಲ್ಲಿ ಬಿಜೆಪಿಯ ಪರವಾಗಿ ಜನರ ಒಲವಿದೆ ಎಂದು ಅವರು ತಿಳಿಸಿದರು.
ಅ. 30 ರಂದು ಚುನಾವಣೆ ಮುಗಿದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 140 ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಬೈ ಎಲಕ್ಷನ್ ಚುನಾವಣೆ ಮುಗಿದ ಬಳಿಕ ರಾಜ್ಯದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುವೆ ಎಂದು ಯಡಿಯೂರಪ್ಪ ತಿಳಿಸಿದರು.
ಯಾವುದೇ ಪಕ್ಷದ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ದೇವೇಗೌಡರು ಕೂಡ ಮತಕ್ಷೇತ್ರದಲ್ಲೇ ಉಳಿದ ತಮ್ಮ ಅಬ್ಯರ್ಥಿಯ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಆದರೆ ಇಂದು ಜನರ ಒಲವು ಬಿಜೆಪಿಯತ್ತ ಇದೆ. ಹೀಗಾಗಿ ಎರಡು ಕ್ಷೇತ್ರ ನಾವು ಗೆಲ್ಲುತ್ತೇವೆ ಎಂದು ಅವರು ತಿಳಿಸಿದರು.
ತೃತಿಯ ರಂಗ ರಚನೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನನಗೆ ಐಡಿಯಾ ಇಲ್ಲ. ಯಾರಾದರೂ ಮಾಡುತ್ತೇನೆ ಎಂದರೆ ಮಾಡಿಕೊಳ್ಳಲಿ. ಬಿಜೆಪಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಮುಂದೆ ಕೂಡ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಬೇಕು ಎಂಬುದು ನಮ್ಮ ಆಶಯ. ಮುಂದಿನ ಎಲ್ಲ ಚುನಾವಣೆಗಳನ್ನು ಗೆಲ್ಲುವದು ನಮ್ಮ ಕರ್ತವ್ಯ. ಆ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡ ಸುರೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.