ಬರಡು ಭೂಮಿಯಲ್ಲಿ ಬೆಳೆದ ಪ್ರಥಮ ಫಲವನ್ನು ನಿರೋದಗಿಸಿದ ಆಧುನಿಕ ಭಗೀರಥನಿಗೆ ನೀಡಿ ಕೃತಜ್ಞತೆ ಸಲ್ಲಿಸಿದ ರೈತ

ವಿಜಯಪುರ: ರೈತರು ತಾವು ಬೆಳೆಯುವ ಮೊದಲ ಬೆಳೆ ಮತ್ತು ಫಲವನ್ನು ದೇವರಿಗೆ ಅರ್ಪಿಸುವ ಮೂಲಕ ಕೃತಜ್ಞತೆ ಸಲ್ಲಿಸುವುದು ಸಾಮಾನ್ಯ.  ಆದರೆ, ಇಲ್ಲೋಬ್ಬ ರೈತ ತನ್ನ ಹೊಲದಲ್ಲಿ ಬೆಳೆದ ಪ್ರಥಮ ಹಣ್ಣನ್ನು ತನ್ನ ಜಮೀನಿಗೆ ನೀರು ಬರಲು ಕಾರಣರಾದ ಮತ್ತು ಆಧುನಿಕ ಭಗೀರಥ ಎಂದೇ ಕರೆಯಿಸಿಕೊಳ್ಳುವ ತನ್ನ ಅಚ್ಚುಮೆಚ್ಚಿನ ನಾಯಕನಿಗೆ ನೀಡಿ ಪ್ರೀತಿ ತೋರಿಸಿದ ಪ್ರಸಂಗ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಪ್ರಸಂಗ ನಡೆದಿದ್ದು, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸಿದ್ದಾಪುರ ಕೆ. ಗ್ರಾಮದಲ್ಲಿ.  ನೀರಿನ ಭವಣೆಯಿಂದ ಬಸವಳಿದಿದ್ದ ನಮಗೆ ಭಗೀರಥರಾಗಿ ಬಂದು,  ನೀರು ಕೊಟ್ಟಿದ್ದೀರಿ.  ನಿಮ್ಮ ನೀರಿನಿಂದ ಸುಂದರ ಸಿಹಿ ಫಲಗಳನ್ನು ಬೆಳೆದಿದ್ದೇವೆ.  ಅದರ ಪ್ರಥಮ ಫಲವನ್ನು ನಿಮಗೆ ಅರ್ಪಣೆ ಮಾಡಿ ಬೋಣಿಗೆ ಮಾಡುತ್ತಿದ್ದೇವೆ ಎಂದು ವಿಜಯಪುರ ಜಿಲ್ಲೆಯ ಮಲಕನದೇವರಹಟ್ಟಿಯ ಪ್ರಗತಿಪರ ರೈತ ರಮೇಶ ಜಂಬಗಿ ಹೇಳಿದರು.

 

ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಹಾಲಿ ಶಾಸಕ ಎಂ. ಬಿ. ಪಾಟೀಲ ಸಿದ್ದಾಪುರ ಕೆ. ಗ್ರಾಮಕ್ಕೆ ಆಗಮಿಸಿದ್ದರು.  ಈ ಸಂದರ್ಭದಲ್ಲಿ ಅವರನ್ನು ಭೇಟಿಯಾದ ರೈತ ತನ್ನ ತೋಟದಲ್ಲಿ ಬೆಳೆದ ಪೇರಲ ಹಣ್ಣಿನ ಪ್ರಥಮ ಫಲಗಳನ್ನು ರಮೇಶ ಜಂಬಗಿ ನೀಡಿದರು.  ನೀರಿನಿಂದ ಕಂಗೆಟ್ಟಿದ್ದ ನಾವು ಒಕ್ಕಲುತನವೇ ಬೇಡ ಎಂದು ಕುಳಿತಿದ್ದಾಗ ನೀವು ತುಬಚಿ-ಬಬಲೇಶ್ವರ ಯೋಜನೆಯಡಿ ಈ ಭಾಗದಲ್ಲಿ ನೀರು ಹರಿಸಿದ್ದರ ಪರಿಣಾಮ ನಮ್ಮ ಒಕ್ಕಲುತನ ಉನ್ನತಿಗೆ ಬಂದಿದೆ.  ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದೇನೆ.  ಅದರಲ್ಲಿ ತೋಟಗಾರಿಕೆ ಬೆಳೆಯಾದ ಪೇರು ಹಣ್ಣು ಕೃಷಿ ಮಾಡಿದ್ದು, ಅದರ ಮೊದಲ ಫಲವನ್ನು ತಮಗೆ ಅರ್ಪಣೆ ಮಾಡುತ್ತಿದ್ದೇನೆ ಎಂದು ರೈತ ರಮೇಶ ಜಂಬಗಿ ಈ ಸಂದರ್ಭದಲ್ಲಿ ತಿಳಿಸಿದರು.

ಈ ಮೊದಲು ಮೂರು ಬೋರ್‍ವೆಲ್ ಕೊರೆಯಿಸಿದ್ದರೂ ಒಂದು ಎಕರೆ ಪ್ರದೇಶಕ್ಕೂ ನೀರು ಸಾಕಾಗುತ್ತಿರಲ್ಲ.  ಆದರೆ ಇಂದು ತಮ್ಮ ನೀರಾವರಿ ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಿದ್ದು, ಅದೇ ಮೂರು ಬೋರ್‍ವೆಲ್‍ಗಳ ಸಹಾಯದಿಂದ ಈಗ ಆರು ಎಕರೆ ಪ್ರದೇಶದಲ್ಲಿ ಫಲವತ್ತಾದ ಬೆಳೆಗಳನ್ನು ಬೆಳೆಯುತ್ತಿದ್ದೇನೆ.  ಮೂರು ಎಕರೆ ದ್ರಾಕ್ಷಿ, ಎರಡು ಎಕರೆಯಲ್ಲಿ 300 ಪೇರಲ( ಮಹಾರಾಷ್ಟ್ರದ ಕೇಸರ ತಳಿ) ಹಣ್ಣುಗಳ ಗಿಡ ಹಾಗೂ 300 ಗೋಲ್ಡನ್ ಸಿತಾಫಲ ಬೆಳೆಯುತ್ತಿದ್ದೇನೆ ಎಂದು ರೈತ ರಮೇಶ ಜಂಬಗಿ ಸಂತಸದಿಂದ ತಿಳಿಸಿದ್ದು ಆಧುನಿಕ ಭಗೀರಥ ಖ್ಯಾತಿಯ ಎಂ. ಬಿ. ಪಾಟೀಲ ಅವರ ನೀರಾವರಿ  ಯೋಜನೆಗಳಿಂದ ರೈತರಿಗೆ ಸಿಗುತ್ತಿರುವ ಫಲದ ಪ್ರತೀಕವಾಗಿತ್ತು.

 

Leave a Reply

ಹೊಸ ಪೋಸ್ಟ್‌