ವಿಜಯಪುರ: ಈದ್ ಮಿಲಾದ್ ದಿನ ಮುಸ್ಲಿಂ ಮತದಾರರತ್ತ ಚಿತ್ತ ಹರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಈ ಮೂಲಕ ಬೈ ಎಲೆಕ್ಷನ್ ಪ್ರಚಾರಕ್ಕೆ ಧುಮುಕರಿರುವ ಯಡಿಯೂರಪ್ಪ, ಮೊದಲಿಗೆ ಮೊರಟಗಿ ಮತ್ತು ನಂತರ ಗೊಲಗೇರಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಗೊಲಗೇರಿಯಲ್ಲಿ ಚಿತ್ರನಟಿ ತಾರಾ ಮತ್ತು ಸಚಿವ ಸಿ. ಸಿ. ಪಾಟೀಲ ಹಾಗೂ ಇತರ ಮುಖಂಡರೊಂದಿಗೆ ಯಡಿಯೂರಪ್ಪ ರೋಡ್ ಶೋ ನಡೆಸುವ ಮೂಲಕ ಮತ ಯಾಚಿಸಿದರು.
ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದವರು ನಾನು ಮುಸ್ಲಿಂ ಬಾಂಧವರಿಗೆ ಸೌಲಭ್ಯ ಕೊಡದೆ ಕೇವಲ ಹಿಂದೂಗಳಿಗೆ ಮಾತ್ರ ಕೊಟಿರುವುದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 135 ಸ್ಥಾನ ಗೆಲ್ಲುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಾನು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ನಾವು ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡಿರುವ ಒಂದು ಉದಾಹರಣೆ ಇದ್ದರೆ ಕೊಡಿ. ಆದರೂ ಮುಸ್ಲಿಂ ಬಂಧುಗಳು ನಮ್ಮಿಂದ ದೂರ ನಿಂತಿದ್ದೀರಿ. ನೀವೆಲ್ಲ ರಮೇಶ ಭೂಸನೂರ ಅವರಿಗೆ ಓಟ ಹಾಕುವ ಮೂಲಕ ಗೆಲ್ಲಿಸಿ. ನೀವು ಭೂಸನೂರ ಅವರನ್ನು ಗೆಲ್ಲಿಸಿದರೆ ಈ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ. ಬೆಂಗಳೂರಿಗೆ ಬಂದರೆ ಸಂಕೋಚ ಮಾಡದೆ ಬೆಂಗಳೂರಿನ ಕಾವೇರಿ ನಿವಾಸಕ್ಕೆ ಬರಬೇಕು ಎಂದು ಮಾಜಿ ಸಿಎಂ ಮನವಿ ಮಾಡಿದರು.
ಗೋಲಗೇರಿ ಗ್ರಾಮದಲ್ಲಿ ಬೃಹತ್ ಮೆರವಣಿಗೆ ಹಾಗೂ ಜನಸ್ತೋಮ ನೋಡಿದ್ರೆ ನಾನು ಶಿಕಾರಿಪುರದಲ್ಲಿದ್ದೆನೋ ಅಥವಾ ಇಲ್ಲಿದ್ದೇನೋ ಎನಿಸುತ್ತಿದೆ ಎಂದು ಹೇಳಿದರು.
ಹಣದ ಬಲದಿಂದ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಜನ ಪಾಠ ಕಲಿಸಲಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಇನ್ನೂ ಉಳಿದಿದೆ. ಈ ಬೈ ಎಲೆಕ್ಷನ್ ನಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಗೆಲ್ಲಿಸುವ ಮೂಲಕ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಗೆ ಸ್ಥಳ ಇಲ್ಲ ಎಂಬುದನ್ನು ತೋರಿಸಬೇಕಿದೆ ಎಂದು ಹೇಳಿದರು.
ದೇಶದ ಭವಿಷ್ಯ ಯುವಕ ಮತ್ತು ಯುವತಿಯರ ಕೈಯಲ್ಲಿದೆ. ಅನ್ನವನು ಕೊಡು ಮೊದಲು, ಬಟ್ಟೆಯನು ಕೊಡು ಮೊದಲು, ಇರಲು ಮನೆಯನ್ನು ಕೊಡು ಮೊದಲು ಎಂದು ನಾನು ಹೇಳಿದ್ದೆ. ಆ ಕೆಲಸವನ್ನು ಪ್ರಧಾನಿ ನರೇಂದ್ರ ಮೋದೀಜೀ ಮತ್ತು ನಾವೆಲ್ಲರೂ ಸೇರಿ ಮಾಡಲಿದ್ದೇವೆ. ಬಡವರ ಮನೆಯಲ್ಲಿ ಹೆಣ್ಣು ಹುಟ್ಟಿದಾಗ ಕಣ್ಣೀರು ಹಾಕಬಾರದು ಎಂದು ಭಾಗ್ಯಲಕ್ಷ್ಮೀ ಯೋಜನೆ ತಂದಿದ್ದೇವೆ. ಯುವಕರು ಮತ್ತು ಯುವತಿಯರು ಸ್ವಂತ ಉದ್ಯೋಗ ಮಾಡಬೇಕು ಎಂಬ ಕಾರಣಕ್ಕೆ ಬ್ಯಾಂಕ್ ನಲ್ಲಿ ಸಾಲ ಕೊಡುವ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ, ಎಂ. ಟಿ. ಬಿ. ನಾಗರಾಜ, ಶಾಸಕ ಎ. ಎಸ್. ಪಾಟೀಲ ನಡಹಳ್ಳಿ, ವಿಧಾನ ಪರಿಷತ ಸದಸ್ಯರಾದ ಚಿತ್ರನಟಿ ತಾರಾ, ಹನುಮಂತ ನಿರಾಣಿ, ಬಿಜೆಪಿ ಅಭ್ಯರ್ಥಿ ರಮೇಶ ಭಫೂಸನೂರ, ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.