ನನ್ನ ಚರಿತ್ರೆ ರಹಸ್ಯ ಬಹಿರಂಗ ಪಡಿಸಿ- ಯತ್ನಾಳ ಗೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಸವಾಲು

ವಿಜಯಪುರ: ಕುಮಾರಸ್ವಾಮಿ ಅವರ ರಹಸ್ಯ ತಮಗೆ ಗೊತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನನ್ನ ಚರಿತ್ರೆ ಇದ್ದರೆ ಹೊರಗೆ ತಂದುಬಿಡಿ ಎಂದು ಸವಾಲು ಹಾಕಿದ ಅವರು ನನ್ನ ಬಗ್ಗೆ ಏನೇನು ಗೊತ್ತಿದೇ ಎಲ್ಲವನ್ನು ಹೊರಗೆ ತಂದು ಬಿಡಿ. ಪಾಪ ನನ್ನ ಜೊತೆಗೆ ಜೆಡಿಎಸ್ ನಲ್ಲಿ ಎರಡು ವರ್ಷ ಇದ್ದರು. ಅದಕ್ಕಾಗಿ ನನ್ನ ಬಗ್ಗೆ ಇರುವ ಚರಿತ್ರೆ ಹೊರಗೆ ತರಲಿ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಸಿಂದಗಿ ಬೈ ಎಲೆಕ್ಷನ್ ನಲ್ಲಿ ಮತದಾರರನ್ನು ಸೆಳೆಯಲು ಆಡಳಿತ ಬಿಜೆಪಿ ಭರವಸೆ ನೀಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಸಿಎಂ ಆಗಿದ್ದಾಗ ರೂ. 1200 ಕೋ. ಅನುದಾನ ಬಂದಿದೆ ಎಂದು ಈಗಿನ ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ. ಆವರ ತಂದೆ ಅಭಿವೃದ್ಧಿಗಾಗಿ ಹಣ ತಂದಿದ್ದಾರೆ ಎಂದು ಹೇಳಿದ್ದಾರೆ.  ಆ ಕುರಿತು ಪುಸ್ತಕ ಹೊರಡಿಸಿದ್ದಾರೆ ಎಂದು ಹೇಳುವ ಮೂಲಕ ದಿ. ಎಂ. ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ವಿರುದ್ಧ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಹಳ್ಳಿಗಳನ್ನು ನೋಡಿದರೆ ಹಣ ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಬೇಕಾಗುತ್ತದೆ. ಅದು ಯಾರ ಅಭಿವೃದ್ಧಿಗೆ ಹೋಯ್ತು ಎಂದು ಪ್ರಶ್ನೆ ಮಾಡಬೇಕಿದೆ. ಕಾಂಗ್ರೆಸ್ ಬಿಜೆಪಿ ನಿರಂತರ ಆಡಳಿತ ನಡೆಸಿದ್ದರೂ ಸಿಂದಗಿ ಮತಕ್ಷೇತ್ರಕ್ಕೆ ಕೊಡುಗೆ ಇಲ್ಲ. ನಮಗೆ ನೈತಿಕತೆ ಇದೆ. ಜನಾನೇ ಮಾತನಾಡುತ್ತಾರೆ. ಅಣ್ಣ ಕಬ್ಬು ಬೆಳೆಯಲು ಆಗ್ತಿರಲಿಲ್ಲ ಎನ್ನುತ್ತಿದ್ದಾರೆ. ಇವರ ಕೊಡುಗೆ ಬಗ್ಗೆ ಯಾರೂ ಮಾತನಾದುವ ಸ್ಥಿತಿ ಇಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳನ ಕುಮಾರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಆ ವಿಷಯ ಮಾತನಾಡಿದರೆ ಇವರು ಜನರ ಮುಂದೆ ಬರೋಕಾಗಲ್ಲ. ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿದೆ. ವೈಯುಕ್ತಿಕ ವಿಷಯಗಳ ಬಗ್ಗೆ ಚರ್ಚೆ ಮಾಡಿದರೆ ಯಾರಾರ ತಟ್ಟೇಯಲ್ಲಿ ಹೆಗ್ಗಣ ಬಿದ್ದಿದೆಯೋ, ನೊಣ‌ ಬಿದ್ದಿದೆಯೋ ಎಂದು ಅವರವರೇ ಅತ್ಮ ವಿಮರ್ಶೆ ಮಾಡಿಕೊಂಡರೆ ಉತ್ತರ ಸಿಗತ್ತದೇ.  ಯಾರಾರು ಮಾತನಾಡುತ್ತಾರೆ. ಅವರ ಹಿನ್ನೆಲೆ ಏನು ಎಂಬ ಚರ್ಚೆ ಮಾಡಲು ಒಂದು ದಿನ ಬೇಕಾಗುತ್ತದೆ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಬೈ ಎಲೆಕ್ಷನ್ ನಲ್ಲಿ ಜೆಡಿಎಸ್ ನಾಯಕರು ಹಾನಗಲ್ ಬಿಟ್ಟು ಸಿಂದಗಿಗೆ ಹೆಚ್ಚು ಒತ್ತು ಕೊಟ್ಟಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು,‌ ಕೇವಲ ಸಿಂದಗಿ ಕ್ಷೇತ್ರಕ್ಕೆ ಒತ್ತು ನೀಡುತ್ತಿಲ್ಲ. ನಾಡಿದ್ದು ಹಾನಗಲ್ ಗೆ ಹೋಗುತ್ತೇನೆ. ಮೂರು ದಿನಗಳ ಕಾಲ ಹಾನಗಲ್ ನಲ್ಲಿ ಪ್ರಚಾರ ಮಾಡುತ್ತೇನೆ. ಹಾನಗಲ್ ನಲ್ಲಿ ನಮಗೆ ಶಕ್ತಿ ಇಲ್ಲ. ಕಳೆದ ಬಾರಿ 1200 ಮಾತ್ರ ಮತ ಪಡೆದಿದ್ದೇವೆ. ಈ ಬಾರಿ ಹೋರಾಟ ನೀಡಲು ಅಭ್ಯರ್ಥಿ ಹಾಕಿದ್ದೇವೆ ಎಂದು ತಿಳಿಸಿದರು.

ಬೈ ಎಲೆಕ್ಷನ್ ಘೋಷಣೆಯಾದ ಬಳಿಕ ಆರ್ ಎಸ್ ಎಸ್ ಹಾಗೂ ಸಿದ್ದರಾಮಯ್ಯ ಟಾರ್ಗೆಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ನನಗಾದ ಅನುಭವಗಳಿಂದ ಈ ಚರ್ಚೆ ಮಾಡಿದ್ದೇನೆ. ಇಲ್ಲಿ ಸಂಘ, ಸಂಸ್ಥೆ, ವ್ಯಕ್ತಿ ಗುರುತಿಸಿ ಮಾತನಾವುವಂಥದ್ದಲ್ಲ.  ಕೆಲವು ನಡವಳಿಕೆಗಳು ಏನು ನಡೆಯುತ್ತಿವೆ ಅದರ ಆಧಾರದ ಮೇಲೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ವಿರುದ್ಧ ಸರಣಿ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಚ್. ಡಿ. ಕುಮಾಅಸ್ವಾಮಿ ಅವರು, ಅಲ್ಪ‌ಸಂಖ್ಯಾತರ ವಿಚಾರದಲ್ಲಿ ಕಾಂಗ್ರೆಸ್ ಗೆ ಐದು ಪ್ರಶ್ನೆ ಕೇಳಿದ್ದೇನೆ. ಅದಕ್ಕೆ ಉತ್ತರ ಕಾಂಗ್ರೆಸ್ಸಿನವರು ಉತ್ತರ ನೀಡುತ್ತಿಲ್ಲ. ಅದನ್ನ ಬಿಟ್ಟು ಬೇರೆ ವಿಚಾರ ಮಾತನಾಡುಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಹಿಂದೂತ್ವದ ಆಧಾರದ ಮೇಲೆ ಪ್ರಚಾರ ಮಾಡುತ್ತಿರುವ ಕುರಿತು ಮಾತನಾಡಿದ ಮಾಜಿ ಸಿಎಂ, ನಾವ್ಯಾರು ಹಿಂದೂಗಳು ಅಲ್ವಾ? ನಾವು ಹಿಂದುತ್ವ ಸಿದ್ದಾಂತ ಇಟ್ಟಕೊಂಡವರಲ್ವಾ ಅವರೊಬ್ಬರೇನಾ ಹಿಂದೂತ್ವ ವಹಿಸಿಕೊಂಡವರು? ಎಂದು ಪ್ರಶ್ನಿಸಿದರು.

ಮತಗಳಿಗಾಗಿ ಹಿಂದೂತ್ವವವನನ್ನು ರಾಜಕಾರಣವನ್ನಾಗಿ ಮಾಡಿಕೊಂಡಿದ್ದಾರೆ. ಹಿಂದುತ್ವದ ಹೆಸರು ಹೇಳೋರು ಯಾವತ್ತು ತುಳಿತಕ್ಕೆ ಒಳಗಾದ ಸಮಾಜಗಳನ್ನು ಅವರ ಗರ್ಭಗುಡಿಯಲ್ಲಿ ಇಟ್ಟುಕೊಳ್ತಾರಾ? ಹಿಂದೂತ್ವದ ಹೆಸರು ಹೇಳುವವರು ಹಲವಾರು ತಾರತಮ್ಯದ ಕೊಡುಗೆ ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ಬಿಜೆಪಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ದ ಕಿಡಿ ಕಾರಿದ ಅವರು, ನಾವು ಹಿಂದುಗಳು ಅಲ್ವೇ? ಹಿಂದುತ್ವದ ಹೆಸರಿನಲ್ಲಿ ಮತಕ್ಕಾಗಿ ಬಿ. ಎಸ್. ಯಡಿಯೂರಪ್ಪ ರಾಜಕಾರಣ ಮಾಡುತ್ತಾರೆ. ಹೆಸರಿಗೆ ಮಾತ್ರ ಹಿಂದುತ್ವ ಹೆಸರು ಹೇಳುತ್ತಾರೆ. ಒಂದು ಕಡೆಗೆ ಮುಸ್ಲಿಮರನ್ನು ದೇಶದಿಂದ ಹೊರಗಡೆಗೆ ಇಡಲು ಹೇಳುತ್ತಾರೆ. ಮತ್ತೊಂದೆಡೆ ಮುಸ್ಲಿಮರು ನಮ್ಮೊಂದಿಗೆ ಬರುಬೇಕು ಎನ್ನುತ್ತಾರೆ. ಬಿಜೆಪಿಯವರು ಸಮಯ ಸಾಧಕರು. ಅವರಿಗೆ ಯಾವ ಯಾವ ಸಂದರ್ಭದಲ್ಲಿ ಏನೇನ ಹೇಳಬೇಕು ಎನ್ನುವುದು ಗೊತ್ತಿದೆ. ಬಿಜೆಪಿಯವರು ಹೇಳಿದ್ದನ್ನು ಮರೆತು ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿಂದಗಿಯ ಮತಕ್ಷೇತ್ರದಲ್ಲಿ 30 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಇನ್ನು 14 ಹಳ್ಳಿಗಳಿಗೆ ನಾನೇ ಖುದ್ದಾಗಿ ಭೇಟಿ ನೀಡುತ್ತಿದ್ದೇನೆ. ದೊಡ್ಡ ಪ್ರಚಾರಗಳಿಗೆ ಹಳ್ಳಿಗಳಿಂದ ಜನ ತಂದು ಶೋ ಮಾಡೋಕೆ ಹೋಗುತ್ತಿಲ್ಲ ಎಂದು ಅವರು ಕಾಂಗ್ರೆಸ್ ಮತ್ತು ಬಿಜೆಪಿಗೆ ಟಾಂಗ್ ನೀಡದರು.

ನಾನೇ ಹಳ್ಳಿಗಳತ್ತ ಹೋಗುತ್ತಿದ್ದೇನೆ. ಮತದಾರರಿಗೆ ಭೇಟಿಯಾಗುತ್ತಿದ್ದೇನೆ. ಮಾದರಿ ಕ್ಷೇತ್ರದ ಬಗ್ಗೆ ಚರ್ಚೆ ಮಾಡುವವರು ಐದು ವರ್ಷಗಳಿಂದ ಏನು ಮಾಡಿದ್ದಾರೆ? ದೇವೇಗೌಡರು ನೀರಾವರಿ ಯೋಜನೆಗೆ ನೀಡಿದ ಕೊಡುಗೆಯನ್ನು ಜನರು ಈಗಲು ನೆನೆಸುತ್ತಿದ್ದಾರೆ. ಈಗೀನ ರಾಜಕೀಯ ವಾತಾವರಣ ನೋಡಿದರೆ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತಿದ್ದೇವೆ. ಸಿಂದಗಿ ಕ್ಷೇತ್ರದಲ್ಲಿ ಜನತೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ನಾಡಗೌಡ ಮತ್ತು ಇತರ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌